ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ವಿರುದ್ಧ ಕೇಸು ದಾಖಲಿಸಲು ವಿ.ಎಸ್.ಉಗ್ರಪ್ಪ ಸೂಚನೆ

ಬೆಂಗಳೂರು, ಆ.3: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾಳ ಅಸ್ವಾಭಾವಿಕ ಸಾವಿನ ಪ್ರಕರಣದಲ್ಲಿ ಆಡಳಿತ ಮಂಡಳಿ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಕೂಡಲೇ ಮೊಕದ್ದಮೆ ದಾಖಲಿಸಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಮಹಿಳೆ-ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಳ್ವಾಸ್ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯ ನಿರ್ಲಕ್ಷತೆ ಹಾಗೂ ಆತ್ಮಹತ್ಯೆಗೆ ಪ್ರೇರಣೆ ಹಿನ್ನೆಲೆಯಲ್ಲಿ ಪೊಲೀಸರು ಕೂಡಲೇ ಕೇಸು ದಾಖಲಿಸಬೇಕೆಂದು ನಿರ್ದೇಶಿಸಿದರು.
ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ 50ಲಕ್ಷ ರೂ. ಪರಿಹಾರವನ್ನು ಕಾವ್ಯಾಳ ಕುಟುಂಬಕ್ಕೆ ಕೊಡಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದ ಅವರು, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 26 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ವಾರ್ಷಿಕ 200ಕೋಟಿ ರೂ.ವಹಿವಾಟು ನಡೆಯುತ್ತಿದೆ. ಆದರೆ, ವಿದ್ಯಾರ್ಥಿಗಳ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಭಿನ್ನ ಲೋಕ: ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 26 ಸಾವಿರ ವಿದ್ಯಾರ್ಥಿಗಳು, ಆರೇಳು ಸಾವಿರ ಮಂದಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸೇರಿದಂತೆ 32 ಸಾವಿರಕ್ಕೂ ಅಧಿಕ ಮಂದಿ ಒಂದೇ ಕ್ಯಾಂಪಸ್‌ನಲ್ಲಿದ್ದಾರೆ. ಆದರೆ, ಅಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಲಭ್ಯಗಳಿಲ್ಲ.
ನಾನು ನನ್ನ ಜೀವನದಲ್ಲೇ ಇಂತಹ ದೊಡ್ಡ ಶಿಕ್ಷಣ ಸಂಸ್ಥೆಯನ್ನು ನೋಡಿಲ್ಲ. ಅದೊಂದು ಸಂಪೂರ್ಣ ಭಿನ್ನ ಲೋಕ. ಎಲ್‌ಕೆಜಿಯಿಂದ ಪದವಿ ಹಂತದವರೆಗೆ ಶಿಕ್ಷಣ ನೀಡಲಾಗುತ್ತಿದೆ. ಆಳ್ವಾಸ್ ಸಂಸ್ಥೆಯ ಹಾಸ್ಟೆಲ್ ಕೊಠಡಿಗಳು ಅಕ್ಷರಶಃ ಕಸದ ತೊಟ್ಟಿಗಳಂತಿವೆ. ಶಿಕ್ಷಣ ಸಂಸ್ಥೆಗೆ ಅನುಮತಿ ಪಡೆದು ಅನಧಿಕೃತವಾಗಿ ಹಾಸ್ಟೆಲ್ ನಡೆಸಲಾಗುತ್ತಿದೆ ಎಂದರು.
ಇಂತಹ ಶಿಕ್ಷಣ ಸಂಸ್ಥೆಗಳ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು. ತಮ್ಮ ಮಕ್ಕಳನ್ನು ಸೇರಿಸುವ ಮುನ್ನ ಆಲೋಚಿಸಬೇಕು ಎಂದು ಮನವಿ ಮಾಡಿದ ಉಗ್ರಪ್ಪ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 28ಕ್ಕೂ ಹೆಚ್ಚು ವಸತಿ ಶಾಲೆಗಳಿದ್ದು, ಅವುಗಳಿಗೆ ಕೂಡಲೇ ನಿಯಮಾವಳಿ ರೂಪಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.







