ಸಿಎನ್‌ಸಿಯಿಂದ ಸಾರ್ವತ್ರಿಕ ಕಕ್ಕಡ ಪದ್‌ನೆಟ್ಟ್ ಹಬ್ಬಾಚರಣೆ

ಮಡಿಕೇರಿ,ಆ.3: ಕೊಡಗಿನ ಸಾಂಪ್ರದಾಯಿಕ ಕಕ್ಕಡ ಪದ್‌ನೆಟ್ಟ್ ಹಬ್ಬವನ್ನು ಸಿಎನ್‌ಸಿ ಸಂಘಟನೆ ವತಿಯಿಂದ ಮಡಿಕೇರಿ ಸನಿಹದ ಕ್ಯಾಪಿಟಲ್ ವಿಲೇಜಿನ ಗದ್ದೆಯಲ್ಲಿ ನಾಟಿ ಕಾರ್ಯ ನಡೆಸುವ ಮೂಲಕ ಸಾರ್ವತ್ರಿಕವಾಗಿ ಸಂಭ್ರಮದಿಂದ ಆಚರಿಸಲಾಯಿತು.
ನಂದಿನೆರವಂಡ ನಿಶಾ ಅಚ್ಚಯ್ಯ ಗುರುಕಾರೋಣರ ಕುರಿತು ಜನಪದ ಗೀತೆ ಹಾಡಿದ ಬಳಿಕ ನೆಲ್ಲಕ್ಕಿಯಡಿ ಗುರುಕಾರೋಣರಿಗೆ ನೈವೇದ್ಯ ಅರ್ಪಿಸಿ, ಭತ್ತದ ಗದ್ದೆಗೆ ದುಡಿಕೊಟ್ಟ್ ಪಾಟ್‌ನೊಂದಿಗೆ ತೆರಳಿ ಅಲ್ಲಿ ನಾಟಿ ನೆಡುವ ಮೂಲಕ ಕೊಡವರ ರೈತ ಪರಂಪರೆಯನ್ನು ದೃಢೀಕರಿಸಲಾಯಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ಸಂಘಟನೆಯ ಪ್ರಮುಖರು ಕ್ಯಾಪಿಟಲ್ ವಿಲೇಜ್ ಭತ್ತದ ಗದ್ದೆಯಲ್ಲಿ ನಾಟಿ ಮಾಡುವುದರ ಮೂಲಕ ಕಕ್ಕಡ ಪದ್‌ನೆಟ್ಟ್ ಹಬ್ಬಕ್ಕೆ ಚಾಲನೆ ದೊರೆಯಿತು.
ಬಳಿಕ ಮದ್ದ್ ಪುಟ್ಟ್ ಮತ್ತು ಮದ್ದ್ ಪಾಯಸವನ್ನು ಸ್ವೀಕರಿಸಲಾಯಿತು. ಈ ಸಂದರ್ಭ ನಡೆದ ಸಭೆಯಲ್ಲಿ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಮಾತನಾಡಿ, ಭೂತಾಯಿಗೂ ಕೊಡವರಿಗೂ ಇರುವ ಅವಿನಾಭಾವ ಸಂಬಂಧವನ್ನು ಕಕ್ಕಡ ಪದ್‌ನೆಟ್ಟ್ ಆಚರಣೆಯ ಮೂಲಕ ದೃಢೀಕರಿಸುವುದರೊಂದಿಗೆ ಮುಂದಿನ ಪೀಳಿಗೆಗೆ ಕೊಡವರ ಸಂಸ್ಕೃತಿ ಹಾಗೂ ಪರಂಪರೆಯನ್ನು ಹಸ್ತಾಂತರಿಸುವ ಕಾರ್ಯವೂ ಈ ಮೂಲಕ ನಡೆಯುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭ ಕೊಡಗಿಗೆ ಕೇಂದ್ರಾಡಳಿತ ಪ್ರದೇಶ, ಕೊಡವ ಲ್ಯಾಂಡ್ ಸ್ವಾಯತ್ತತೆ, ಕೊಡವ ಸೂಕ್ಷ್ಮಾತಿ ಸೂಕ್ಷ್ಮ ಅಲ್ಪಸಂಖ್ಯಾತ ಕೊಡವ ಬುಡಕಟ್ಟು ಸ್ಥಾನ ಮಾನ, ಕೊಡವ ಸಮುದಾಯಕ್ಕೆ ರಾಜ್ಯಾಂಗ ಖಾತರಿ, ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರಿಸಬೇಕೆನ್ನುವ ಮತ್ತು ವಿಶ್ವಸಂಸ್ಥೆಯ ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಲಿಸ್ಟಿಗೆ ಕೊಡವ ಸೂಕ್ಷ್ಮ ಅಲ್ಪಸಂಖ್ಯಾತ ಬುಡಕಟ್ಟು ಜನರನ್ನು ಸೇರಿಸಬೇಕೆಂಬ ಹಕ್ಕೊತ್ತಾಯದ ನಿರ್ಣಯವನ್ನು ಈ ಸಂದರ್ಭ ಅಂಗೀಕರಿಸಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು.
ಕಾರ್ಯಕ್ರಮದಲ್ಲಿ ಕಲಿಯಂಡ ಪ್ರಕಾಶ್, ಮೂಕೊಂಡ ದಿಲೀಪ್, ಪುಲ್ಲೇರ ಕಾಳಪ್ಪ, ಬಾಚರಣಿಯಂಡ ಚಿಪ್ಪಣ್ಣ, ಸಂಶೋಧಕಿ ಜ್ಯೋತಿ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಕಾಟುಮಣಿಯಂಡ ಉಮೇಶ್, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಐತಿಚಂಡ ಭೀಮಣಿ ಸೇರಿದಂತೆ ಹಲಗಣ್ಯರು ಪಾಲ್ಗೊಮಡಿದ್ದರು.ಬಾಚರಣಿಯಂಡ ಚಿಪ್ಪಣ್ಣ ಸ್ವಾಗತಿಸಿ, ಅಜ್ಜಿಕುಟ್ಟಿರ ಲೋಕೇಶ್ ವಂದಿಸಿದರು.







