ಮುಂದಿನ ಕೆಲವು ದಶಕಗಳಲ್ಲಿ ಭಾರತದಲ್ಲಿ ಮಾರಣಾಂತಿಕ ಉಷ್ಣ ಮಾರುತಗಳ ಸಾಧ್ಯತೆ:ಅಧ್ಯಯನ ವರದಿ

ಹೊಸದಿಲ್ಲಿ,ಆ.3: ಹವಾಮಾನ ಬದಲಾವಣೆಯಿಂದಾಗಿ ಮುಂದಿನ ಕೆಲವು ದಶಕಗಳಲ್ಲಿ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಸುಮಾರು 1.5 ಶತಕೋಟಿ ಜನರು ಮಾರಣಾಂತಿಕ ಉಷ್ಣ ಮಾರುತಗಳ ಹಾವಳಿಗೆ ಸಿಲುಕುವ ಸಾಧ್ಯತೆಯಿದ್ದು, ಇದು ಅವರನ್ನು ಬದುಕುಳಿಯಲಾಗದ ತಾಪಮಾನ ಮತ್ತು ವ್ಯಾಪಕ ಆಹಾರ ಬಿಕ್ಕಟ್ಟಿಗೆ ಗುರಿಯಾಗಿಸಲಿದೆ ಎಂದು ಎಂಐಟಿ ಅಧ್ಯಯನವೊಂದು ಎಚ್ಚರಿಕೆ ನೀಡಿದೆ.
ಈ ಶತಮಾನದ ಅಂತ್ಯದ ವೇಳೆಗೆ ಹವಾಮಾನ ಬದಲಾವಣೆಯು ವಿಶ್ವದ ಐದನೇ ಒಂದರಷ್ಟು ಜನಸಂಖ್ಯೆ ಹೊಂದಿರುವ, ಕಡುಬಡತನದ ದಕ್ಷಿಣ ಏಷ್ಯಾದಲ್ಲಿ ತೀವ್ರ ಬೇಸಿಗೆ ಉಷ್ಣ ಮಾರುತಗಳಿಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ.
ಈಗಲೂ ಕಾಲ ಮಿಂಚಿಲ್ಲ, ಜಾಗತಿಕ ತಾಪಮಾನದ ಘೋರ ಪರಿಣಾಮಗಳನ್ನು ತಗ್ಗಿಸಲು ಸೂಕ್ತ ಕ್ರಮಗಳನ್ನು ಜಾರಿಗೊಳಿಸಿದರೆ ಈ ಉಷ್ಣ ಮಾರುತಗಳನ್ನು ನಿವಾರಿಸಬ ಹುದಾಗಿದೆ ಎಂದೂ ಸಂಶೋಧಕರು ನುಡಿದಿದ್ದಾರೆ.
ಆದರೆ ಇಂಗಾಲದ ಹೊರಸೂಸುವಿಕೆಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸದಿದ್ದರೆ ಕೆಲವೇ ದಶಕಗಳಲ್ಲಿ ಉಷ್ಣ ಮಾರುತಗಳು ಪ್ರದೇಶದಲ್ಲಿ ಹೆಚ್ಚು ಆಹಾರ ಬೆಳೆಯುವ ಫಲವತ್ತಾದ ಸಿಂಧು ಮತ್ತು ಗಂಗಾ ನದಿಯ ಜಲಾನಯನ ಪ್ರದೇಶಗಳಿಗೆ ದಾಳಿಯಿಡಲು ಆರಂಭಿಸಬಹುದು ಎಂದು ಅವರು ಹೇಳಿದ್ದಾರೆ.
ಉಷ್ಣ ಮಾರುತಗಳಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಬಹುದಾದ ಉತ್ತರ ಭಾರತ, ಬಾಂಗ್ಲಾದೇಶ ಮತ್ತು ದಕ್ಷಿಣ ಪಾಕಿಸ್ತಾನದಲ್ಲಿ ಒಂದೂವರೆ ಶತಕೋಟಿ ಜನರು ವಾಸವಾಗಿದ್ದಾರೆ. ಈ ಪ್ರದೇಶಗಳು ಬಡತನದಿಂದ ಕೂಡಿದ್ದು, ಹೆಚ್ಚಿನ ಜನರು ಬಿಸಿಲಿನಲ್ಲಿ ಯಾವುದೇ ರಕ್ಷಣೆಯಿಲ್ಲದ ಕಠಿಣ ಶ್ರಮವನ್ನು ಬೇಡುವ ಕೃಷಿಯನ್ನೇ ಬದುಕಿಗಾಗಿ ಅವಲಂಬಿಸಿದ್ದಾರೆ. ಹೀಗಾಗಿ ಈ ಹವಾಮಾನ ಬದಲಾವಣೆಗಳಿಗೆ ಈ ಜನರು ಅತ್ಯಂತ ಸುಲಭಭೇದ್ಯರಾಗಿದ್ದಾರೆ ಎಂದು ಎಂಐಟಿಯ ಎಲ್‌ಫೇತ್ ಎಲ್ಟಾಹಿರ್ ತಿಳಿಸಿದ್ದಾರೆ.
ಪರ್ಷಿಯನ್ ಕೊಲ್ಲಿಯು ವಿಶ್ವದಲ್ಲಿ ಉಷ್ಣ ಮಾರುತಗಳ ಅತ್ಯಂತ ತೀವ್ರ ದಾಳಿಗೆ ಗುರಿಯಾಗಲಿರುವ ಪ್ರದೇಶವಾಗಿದ್ದು, ಉತ್ತರ ಭಾರತ ಮತ್ತು ಪೂರ್ವ ಚೀನಾ ನಂತರದ ಸ್ಥಾನಗಳಲಿವೆ ಎಂದು ಅಧ್ಯಯನವು ಬೆಟ್ಟು ಮಾಡಿದೆ.
2015ರ ಬೇಸಿಗೆಯಲ್ಲೂ ದಕ್ಷಿಣ ಏಷ್ಯಾದ ಇತಿಹಾಸದಲ್ಲಿಯೇ ಮಾರಣಾಂತಿಕ ಉಷ್ಣ ಮಾರುತಗಳು ಸೃಷ್ಟಿಯಾಗಿದ್ದು, ಭಾರತ ಮತ್ತು ಪಾಕಿಸ್ತಾನಗಳಲ್ಲಿ ಸುಮಾರು 3,500 ಜನರು ಬಲಿಯಾಗಿದ್ದರು. ಮುಖ್ಯವಾಗಿ ಆರ್ಥಿಕ ಬೆಳವಣಿಗೆಯಿಂದಾಗಿ ಭಾರತ ಮತ್ತು ಚೀನಾ ಹಸಿರುಮನೆ ಅನಿಲ ಹೊರಸೂಸುವಿಕೆ ನಿರಂತರವಾಗಿ ಹೆಚ್ಚುತ್ತಿರುವ ದೇಶಗಳಾ ಗಿವೆ ಎಂದು ಎಲ್ಟಾಹಿರ್ ತಿಳಿಸಿದರು.







