ಅನಿವಾಸಿ ಭಾರತೀಯರಿಗೆ ‘ಪ್ರಾಕ್ಸಿ’ ಮತದಾನದ ಹಕ್ಕು ?

ಹೊಸದಿಲ್ಲಿ, ಆ.3: ಅನಿವಾಸಿ ಭಾರತೀಯರಿಗೆ ‘ಪ್ರಾಕ್ಸಿ’ (ಪ್ರತಿನಿಧಿ) ಮತದಾನದ ಹಕ್ಕು ನೀಡಲು ಅನುಕೂಲವಾಗುವಂತೆ ಚುನಾವಣಾ ನಿಯಮದಲ್ಲಿ ಬದಲಾವಣೆ ತರುವ ಪ್ರಸ್ತಾವನೆಗೆ ಸರಕಾರ ಅನುಮೋದನೆ ನೀಡಿದೆ. ಈ ಪ್ರಸ್ತಾವಕ್ಕೆ ಸಂಸತ್ತಿನಲ್ಲಿ ಅಂಗೀಕಾರ ದೊರೆಯಬೇಕಿದೆ.
ಈ ಹಕ್ಕು ಈಗ ಸೇನಾ ಸಿಬ್ಬಂದಿಗಳಿಗೆ ಇದೆ. ಇದರಂತೆ ಸೇನಾ ಸಿಬ್ಬಂದಿಗಳು ತಮ್ಮ ಬದಲು ಮತದಾನ ಮಾಡಲು ಸಂಬಂಧಿಕರನ್ನು ಖಾಯಂ ‘ಪ್ರತಿನಿಧಿ’ಗಳನ್ನಾಗಿ ಹೆಸರಿಸಲು ಅವಕಾಶವಿದೆ. ಇದೇ ರೀತಿ ಎನ್ನಾರೈಗಳಿಗೂ ಪ್ರಾಕ್ಸಿ ಮತದಾನದ ಅವಕಾಶ ನೀಡಲು ಕೇಂದ್ರ ಸರಕಾರ ಚಿಂತಿಸುತ್ತಿದೆ. ಆದರೆ ಇಲ್ಲಿರುವ ಷರತ್ತು ಎಂದರೆ- ಎಲ್ಲಾ ಚುನಾವಣೆಗಳಿಗೂ ಖಾಯಂ ಪ್ರತಿನಿಧಿಗಳನ್ನು ನೇಮಿಸಲು ಎನ್ನಾರೈಗಳಿಗೆ ಅವಕಾಶವಿರುವುದಿಲ್ಲ.
ಪ್ರತಿಯೊಂದು ಚುನಾವಣೆ ಸಂದರ್ಭದಲ್ಲೂ ಎನ್ನಾರೈ ಮತದಾರರು ತಮ್ಮ ‘ಪ್ರತಿನಿಧಿ’ಯನ್ನು ಹೆಸರಿಸಬಹುದು. ಈ ಕುರಿತು ಸೂಕ್ತ ನೀತಿ ನಿಯಮಗಳನ್ನು ರಚಿಸಲಾಗುವುದು ಎಂದು ಸರಕಾರ ತಿಳಿಸಿದೆ. ಪ್ರಾಕ್ಸಿ ಮತದಾನದ ಅವಕಾಶದಿಂದ ವಿದೇಶದಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವ ಲಕ್ಷಾಂತರ ಮಂದಿ ಭಾರತೀಯರಿಗೆ (ಇವರಲ್ಲಿ ಕೇರಳೀಯರು ಬಹು ಸಂಖ್ಯೆಯಲ್ಲಿದ್ದಾರೆ) ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡಿದಂತಾಗುತ್ತದೆ. ಈ ಮೊದಲು ಎನ್ನಾರೈಗಳಿಗೆ ಅಂಚೆ ಮತದಾನ ಹಕ್ಕು ನೀಡಲು ಚಿಂತಿಸಲಾಗಿತ್ತು. ಆದರೆ ವಿಶ್ವದಾದ್ಯಂತ ಇರುವ ಭಾರತೀಯರಿಗೆ ಈ ಪ್ರಕ್ರಿಯೆ ಅನ್ವಯಿಸಲು ಕಷ್ಟ ಎಂದರಿತ ಸರಕಾರ ಇದೀಗ ಪ್ರಾಕ್ಸಿ ಮತದಾನದ ಅವಕಾಶಕ್ಕೆ ನಿರ್ಧರಿಸಿದೆ. ಒಂದು ವರದಿಯ ಪ್ರಕಾರ ಸುಮಾರು 1 ಕೋಟಿ ಮಂದಿ ಭಾರತೀಯರು ವಿದೇಶದಲ್ಲಿ ನೆಲೆಸಿದ್ದು ಇವರಲ್ಲಿ ಸುಮಾರು 60 ಲಕ್ಷ ಮಂದಿ ಮತಹಾಕುವ ಹಕ್ಕು ಹೊಂದಿದ್ದಾರೆ.
ಬಹುತೇಕ ಅನಿವಾಸಿ ಭಾರತೀಯರು ಬಿಜೆಪಿ ಪರ ಒಲವು ಹೊಂದಿದ್ದಾರೆ ಎನ್ನಲಾಗಿದ್ದು ಎನ್ನಾರೈಗಳಿಗೆ ಪ್ರಾಕ್ಸಿ ಮತದಾನದ ಅವಕಾಶ ಬಿಜೆಪಿಗೆ ಅನುಕೂಲವಾಗಲಿದೆ ಎಂದೂ ಹೇಳಲಾಗುತ್ತಿದೆ. ಆದರೆ ಎನ್ನಾರೈಗಳಿಗೆ ಪ್ರಾಕ್ಸಿ ಮತದಾನದ ಅವಕಾಶದ ಬಗ್ಗೆ ಕಾಂಗ್ರೆಸ್, ಬಿಎಸ್ಪಿ, ಸಿಪಿಐ ಪಕ್ಷಗಳು ವಿರೋಧ ಸೂಚಿಸಿವೆ. ಪ್ರಾಕ್ಸಿ ಮತದಾರರು ನೈಜ ಮತದಾರರ ಆಶಯದಂತೆಯೇ ಮತ ಚಲಾಯಿಸುತ್ತಾರೆ ಎಂಬುದಕ್ಕೆ ಖಾತರಿ ಏನಿದೆ. ಪ್ರಾಕ್ಸಿ ಮತದಾನವು ‘ಗುಪ್ತ ಮತದಾನ’ ಪ್ರಕ್ರಿಯೆಯ ಆಶಯಕ್ಕೆ ವಿರುದ್ಧವಾಗಿದೆ ಎಂಬುದು ಈ ಪಕ್ಷಗಳ ವಾದವಾಗಿದೆ.







