ಬೆಟ್ಟಂಪಾಡಿ ಕಾಲೇಜ್‍ಗೆ ಶಾಸಕಿ ಭೇಟಿ : ಉಪನ್ಯಾಸಕರ ನೇಮಕದ ಭರವಸೆ
ಪುತ್ತೂರು,ಆ.3: ಉಪನ್ಯಾಸಕರನ್ನು ನೇಮಕಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಬೆಟ್ಟಂಪಾಡಿ ಪದವಿ ಕಾಲೇಜ್‍ಗೆ ಗುರುವಾರ ಭೇಟಿ ನೀಡಿದ ಶಾಸಕಿ ಶಕುಂತಳಾ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಶಿಕ್ಷಕರ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಶಾಸಕಿ ಅವರು ತಾನು ತಕ್ಷಣವೇ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ, ಕಮೀಷನರ್ ಅಜಯ್ ನಾಗಭೂಷಣ್ ಮತ್ತು ಕಾಲೇಜ್‍ನ ಜೆಡಿ ಉದಯ ಶಂಕರ್ ಅವರೊಂದಿಗೆ ಮಾತುಕತೆ ನಡೆಸಿ ಉಪನ್ಯಾಸಕರನ್ನು ನೇಮಿಸುವ ಬಗ್ಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಕಾಲೇಜ್‍ನಲ್ಲಿ ಉಪನ್ಯಾಸಕರನ್ನು ಭರ್ತಿಗೊಳಿಸುವಂತೆ ಆಗ್ರಹಿಸಿ ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಆ ಬಳಿಕ ತರಗತಿಗೆ ಹಾಜರಾಗಿರಲಿಲ್ಲ. ಈ ಮಾಹಿತಿ ಅರಿತು ಶಾಸಕಿ ಅವರು ಕಾಲೇಜ್‍ಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಕೆಡಿಪಿ ನಾಮನಿರ್ದೇಶಿತ ಸದಸ್ಯ ಕೃಷ್ಣಪ್ರಸಾದ್ ಆಳ್ವ. ಶಶಿಕುಮಾರ್ ಬೈಲಾಡಿ, ಮಾಧವ ಪೂಜಾರಿ ರೆಂಜ, ದಯಾನಂದ ರೈ, ನಾಗರಾಜ್ ಭಟ್ ಮತ್ತಿತರರು ಜೊತೆಗಿದ್ದರು.





