ಪಡಿತರ ಚೀಟಿ ಅರ್ಜಿ ವಿಲೇವಾರಿಗೆ ಆದೇಶ: ಸಚಿವ ಖಾದರ್

ಮಂಗಳೂರು, ಆ. 3: ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಗ್ರಾಮೀಣ ಮಟ್ಟದಲ್ಲಿ ಆ. 10 ರೊಳಗೆ ಹಾಗೂ ನಗರ ಮಟ್ಟದಲ್ಲಿ ಆ. 15 ರೊಳಗೆ ವಿಲೇವಾರಿ ಮಾಡುವಂತೆ ಆದೇಶ ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ತಾನು ಬುಧವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಆಹಾರ ಇಲಾಖೆಯ ಉಪ ನಿರ್ದೇಶಕರ ಜತೆ ವೀಡಿಯೋ ಕಾನ್ಫೆರೆನ್ಸ್ ನಡೆಸಿ ಮಾಹಿತಿಯನ್ನು ಪಡೆದಿದ್ದು, ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಪಡಿತರ ಚೀಟಿಗಳಿಗಾಗಿ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡುವಂಕೆ ನಿರ್ದೇಶನ ನೀಡಲಾಗಿದೆ ಎಂದರು.
ವಿಳಂಬಕ್ಕೆ ಕಾರಣ ನೀಡದೆ ಆದ್ಯತೆ ನೆಲೆಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈವರೆಗೆ ಒಂದು ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ವೀಡಿಯೋ ಕಾನ್ಫೆರೆನ್ಸ್ ಮಾಹಿತಿ ತಿಳಿದ ತಕ್ಷಣ ಬುಧವಾರ ಒಂದೇ ದಿನದಲ್ಲಿ ರಾಜ್ಯದಲ್ಲಿ ಸುಮಾರು 20 ಸಾವಿರ ಅರ್ಜಿಗಳು ವಿಲೇವಾರಿಯಾಗಿವೆ ಎಂದು ಖಾದರ್ ಹೇಳಿದರು.
ಜನಸ್ನೇಹಿ ಕೇಂದ್ರದಲ್ಲಿ ಹೆಚ್ಚುವರಿ ಸಿಬ್ಬಂದಿ:
ಪ್ರತೀ ಜನಸ್ನೇಹಿ ಕೇಂದ್ರದಲ್ಲಿ ಪಡಿತರ ವ್ಯವಸ್ಥೆಗೆ ಹೆಚ್ಚುವರಿ ಡಾಟಾ ಅಪರೇಟರ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುವುದು. ಅಲ್ಲದೆ, ಅಗತ್ಯಬಿದ್ದರೆ ಒಂದು ಹೆಚ್ಚುವರಿ ಕಂಪ್ಯೂಟರ್‌ಒದಗಿಸಲು ಸೂಚಿಸಲಾಗಿದೆ. ಕೆಲವು ಕಡೆ ಬೆಳಗ್ಗೆ 8 ರಿಂದ 10 ಗಂಟೆ ತನಕ ರೇಷನ್‌ಕಾರ್ಡ್ ಅರ್ಜಿಗಳನ್ನು ಮಾತ್ರ ಅಪ್‌ಲೋಡ್ ನಡೆಸಲು ವ್ಯವಸ್ಥೆ ಮಾಡಲಾಗುವುದು ಎಂದು ಖಾದರ್ ಮಾಹಿತಿ ನೀಡಿದರು.
ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಸಾವು ಪ್ರಕರಣದಲ್ಲಿ ಪೊಲೀಸ್ ಇಲಾಖೆ ಸಮರ್ಪಕ ತನಿಖೆ ನಡೆಸುತ್ತಿದೆ. ಕಾವ್ಯಾರ ಪೋಷಕರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಮತ್ತಿತರರು ಉಪಸ್ಥಿತರಿದ್ದರು.
ಎರಡು ಉಚಿತ ಎಲ್‌ಇಡಿ ಬಲ್ಬ್
ಒಂದು ಲೀಟರ್ ಸೀಮೆ ಎಣ್ಣೆಯ ಸೌಲಭ್ಯವನ್ನು ಪಡೆಯುವ ಪಡಿತರ ಚೀಟಿದಾರರು ಎಣ್ಣೆ ಬೇಡ ಎಂದು ಮನವಿ ಸಲ್ಲಿಸಿದರೆ, ಅಂತಹ ಪಡಿತರ ಚೀಟಿದಾರರ ಕುಟುಂಬಕ್ಕೆ ಚಾರ್ಚ್ ಮಾಡಬಹುದಾದ ತಲಾ ಎರಡು ಎಲ್‌ಇಡಿ ಬಲ್ಬ್‌ಗಳನ್ನು ಉಚಿತವಾಗಿ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.







