ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ‘ನೋಟಾ’ಕ್ಕೆ ಅವಕಾಶ ಕಲ್ಪಿಸಿದ ಸುಪ್ರೀಂ

ಹೊಸದಿಲ್ಲಿ,ಆ.3: ಮಂಗಳವಾರ ಗುಜರಾತ್‌ನಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ‘ನೋಟಾ(ನನ್ ಆಫ್ ದಿ ಅಬವ್)’ ಅಥವಾ ‘ಯಾರಿಗೂ ನನ್ನ ಮತವಿಲ್ಲ’ ಆಯ್ಕೆಯು ಲಭ್ಯವಿರುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ಸ್ಪಷ್ಟ ಪಡಿಸಿದೆ. ನೋಟಾ ಚಲಾವಣೆಗೆ ಅವಕಾಶ ನೀಡದಂತೆ ಕಾಂಗ್ರೆಸ್ ಮಾಡಿಕೊಂಡಿದ್ದ ಮನವಿಯನ್ನು ಅದು ತಿರಸ್ಕರಿಸಿದ್ದು, ಇದು ಪಕ್ಷಕ್ಕೆ ಹಿನ್ನಡೆಯನ್ನುಂಟು ಮಾಡಿದೆ.
ಎಲ್ಲ ಅಭ್ಯರ್ಥಿಗಳನ್ನೂ ತಿರಸ್ಕರಿಸಲು ಮತದಾರನಿಗೆ ಅವಕಾಶ ನೀಡುವ ನೋಟಾವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ವಿರೋಧಿಸಿವೆ, ಇದು ಪರೋಕ್ಷ ಚುನಾವಣೆಗಳ ನೀತಿಗಳಿಗೆ ವಿರುದ್ಧವಾಗಿದೆ ಎಂದು ಅವು ಹೇಳಿವೆ.
ರಾಜ್ಯಸಭಾ ಚುನಾವಣೆಯಲ್ಲಿ ನೋಟಾಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಮತ್ತು ಚುನಾವಣಾ ಆಯೋಗವು ಈ ಬಗ್ಗೆ ಆದೇಶ ಹೊರಡಿಸಿಲ್ಲ ಎಂದು ಕಾಂಗ್ರೆಸ್ ಸರ್ವೋಚ್ಚ ನ್ಯಾಯಲಯದಲ್ಲಿ ಹೇಳಿತ್ತು.
ನೋಟಾವನ್ನು ಹೊಂದಿರುವ ತನ್ನ ನಿರ್ಧಾರವನ್ನು ಪುನರ್‌ಪರಿಶೀಲಿಸಲು ನಿರಾಕರಿಸಿದ್ದ ಚುನಾವಣಾ ಆಯೋಗವು, ಇದೇನೂ ಹೊಸ ನಿರ್ದೇಶವಲ್ಲ ಮತ್ತು 2014ರಲ್ಲಿಯೇ ಇದನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿತ್ತು.
ಇದೇ ಮೊದಲ ಬಾರಿಗೆ ರಾಜ್ಯಸಭಾ ಚನಾವಣೆಯಲ್ಲಿ ಲಭ್ಯವಾಗಿರುವ ನೋಟಾ ಅಯ್ಕೆಯು ಗುಜರಾತ್ ಫಲಿತಾಂಶದ ಮೇಲೆ ಪ್ರಭಾವ ಬೀರುವ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಯಾವುದೇ ಶಾಸಕ ಪಕ್ಷದ ಆದೇಶವನ್ನು ಮೀರಿ ಇತರರಿಗೆ ಮತ ಹಾಕಿದರೆ ಅಥವಾ ನೋಟಾ ಚಲಾಯಿಸಿದರೆ ಆತನನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ಅಂತಹ ಶಾಸಕನ ವಿರುದ್ಧ ಪಕ್ಷವು ಉಚ್ಚಾಟನೆಯಂತಹ ಶಿಸ್ತು ಕ್ರಮಗಳನ್ನು ಕೈಗೊಳ್ಳಬಹುದಾದರೂ ಆತನ ಶಾಸಕ ಸ್ಥಾನ ಅಬಾಧಿತವಾಗಿರುತ್ತದೆ ಮತ್ತು ಆತನ ಮತವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಆಯೋಗವು ಸ್ಪಷ್ಟಪಡಿಸಿದೆ.







