ಹಲ್ಲೆ, ದರೋಡೆ: ಇಬ್ಬರ ಬಂಧನ

ಮಂಗಳೂರು, ಆ. 3: ಬೈಕಂಪಾಡಿ ಸಮೀಪದ ಅಂಗರಗುಂಡಿ ರೈಲ್ವೇ ಟ್ರಾಕಿನಲ್ಲಿ ನಡೆದುಕೊಂಡು ಹೋಗುವ ಕೂಲಿ ಕಾರ್ಮಿಕರನ್ನು ಹಲ್ಲೆ ನಡೆಸಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಪಣಂಬೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕಸ್ಬಾ ಬೆಂಗ್ರೆಯ ನಿವಾಸಿ ಸರ್ಫರಾಝ್ ಚಪ್ಪು (24) ಮತ್ತು ಫರಂಗಿಪೇಟೆಯ ಸೈಫುಲ್ಲಾ ಫರಾಝ್ (19) ಎಂದು ಗುರುತಿಸಲಾಗಿದೆ.
ಪಣಂಬೂರು ಪೊಲೀಸ್ ಠಾಣಾ ನಿರೀಕ್ಷಕ ರಫೀಕ್ ಕೆ.ಎಂ. ಮತ್ತು ಅಪರಾಧ ವಿಭಾಗದ ಪಿಎಸ್‌ಐ ಕುಮರೇಶನ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬೈಕಂಪಾಡಿಯ ಗ್ಯಾರೇಜ್ ಬಳಿಯಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ ಸುಮಾರು 9000 ರೂ. ಮೌಲ್ಯದ ಎರಡು ಮೊಬೈಗಳು ಮತ್ತು 7,000 ರೂ. ಮೌಲ್ಯದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.
Next Story





