ಗಾಂಜಾ ಮಾರಾಟ: ಮೂವರ ಸೆರೆ

ಮಂಗಳೂರು, ಆ. 3: ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೊಂಚಾಡಿ ದೇರೆಬೈಲ್‌ನ ಮಂದಾರಬೈಲ್ ನಿವಾಸಿ ಲಾಯ್ ವೇಗಸ್ (24), ಫಳ್ನೀರ್ ಬಳಿಯ ಅಲ್ಮೆಡ ಕರ್ಕಡ (24), ಕದ್ರಿ ಕಂಬಳದ ಪ್ರದೀಪ್ ಪ್ರಭು (27) ಬಂಧಿತ ಆರೋಪಿಗಳು. ಇವರಿಂದ 1.200 ಕೆ.ಜಿ. ಗಾಂಜಾ, ಮಾರಾಟ ಮಾಡಲು ಉಪಯೋಗಿಸಿದ ದ್ವಿಚಕ್ರ ವಾಹನ ಮತ್ತು ಮೂರು ಮೊಬೈಲ್ ಫೋನ್‌ಗಳ ಸಹಿತ ಒಟ್ಟು 68,500 ರೂ. ವೌಲ್ಯದ ಸೊತ್ತನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆ.3ರಂದು ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣಾ ವ್ಯಾಪ್ತಿಯ ಕದ್ರಿ ಕಂಬ್ಲ ರಸ್ತೆಯ ಬಳಿಯ ಭಾರತ್ ಬೀಡಿ ಕಾಂಪ್ಲೆಕ್ಸ್ ಎದುರುಗಡೆಯಲ್ಲಿ ಬಜಾಜ್ ಪ್ಲಾಟಿನಾ ಬೈಕೊಂದರಲ್ಲಿ ಮೂವರು ಯುವಕರು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ.
ಗಾಂಜಾವನ್ನು ಆರೋಪಿಗಳು ಶಿಕಾರಿಪುರ ಕಡೆಯಿಂದ ಖರೀದಿ ಮಾಡಿ ಮಂಗಳೂರು ನಗರದಲ್ಲಿ ಮಾರಾಟ ಮಾಡಲು ತಂದಿದ್ದರು. ಆರೋಪಿಗಳ ಪೈಕಿ ಲಾಯಿ ವೇಗಸ್ ಎಂಬಾತನ ವಿರುದ್ಧ ಈ ಹಿಂದೆ ಕಾವೂರು, ಉರ್ವಾ, ಬರ್ಕೆ, ಮಂಗಳೂರು ಉತ್ತರ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದ್ವಿಚಕ್ರ ವಾಹನ ಕಳವು, ಹಲ್ಲೆ, ಅಪಹರಣ ಮುಂತಾದ ಸುಮಾರು 9 ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತತಿನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್ ಅವರ ಆದೇಶದಂತೆ ಡಿಸಿಪಿಗಳಾದ ಕೆ.ಎಂ. ಶಾಂತರಾಜು, ಹನುಮಂತರಾಯ ಮತ್ತು ಎಸಿಪಿ ಸಿಸಿಆರ್‌ಬಿ ವೆಲೆಂಟೈನ್ ಡಿ ಸೋಜಾ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ಸುನೀಲ್ ವೈ. ನಾಯ್ಕ್, ಪಿಎಸ್‌ಐ ಶ್ಯಾಮ್ ಸುಂರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.







