ಐಟಿ ದಾಳಿ: ‘ಶಿಷ್ಟಾಚಾರ ಉಲ್ಲಂಘನೆ’ ಕೇಂದ್ರಕ್ಕೆ ರಾಜ್ಯದ ಪತ್ರ

ಬೆಂಗಳೂರು, ಆ.3: ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದ ದಾಳಿ ವೇಳೆ ಶಿಷ್ಟಾಚಾರ ಉಲ್ಲಂಘನೆ ಆಗದಂತೆ ಆದಾಯ ತೆರಿಗೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಪತ್ರ ಬರೆದಿದೆ.
ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ, ಕೇಂದ್ರದ ಕಂದಾಯ ಇಲಾಖೆಯ ಕಾರ್ಯದರ್ಶಿ ಹಸ್ಮುಖ್ ಆಧಿಯಾಗೆ ಬರೆದಿರುವ ಪತ್ರದಲ್ಲಿ ಅವರು, ಸಚಿವ ಶಿವಕುಮಾರ್ ಹಾಗೂ ಅವರ ಸಹೋದರ ಸಂಬಂಧಿಗಳ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜಾಗತಿ ವಹಿಸುವಂತೆ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ, ಕೇಂದ್ರ ಸರಕಾರದ ಕಂದಾಯ ಇಲಾಖೆ ಕಾರ್ಯದರ್ಶಿ ಹಸ್ಮುಖ್ ಆಧಿಯಾಗೆ ಪತ್ರ ಬರೆದಿದ್ದಾರೆ. ಸಚಿವರ ಮನೆ ಮೇಲೆ ನಡೆಸಿರುವ ದಾಳಿ ಶಿಷ್ಟಾಚಾರದ ಉಲ್ಲಂಘನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಯಾವುದೇ ಅಧಿಕಾರಿ, ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸುವ ವೇಳೆ ಕನಿಷ್ಠ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು. ಬುಧವಾರ ಐಟಿ ಅಧಿಕಾರಿಗಳು ದಿಢೀರನೆ ನಡೆಸಿದ ದಾಳಿ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಸುಭಾಷ್‌ಚಂದ್ರ ದೂರಿದ್ದಾರೆ.
ಐಟಿ ಅಧಿಕಾರಿಗಳು ದಾಳಿ ನಡೆಸುವ ವೇಳೆ ಸರಕಾರಕ್ಕೆ ಮಾಹಿತಿ ನೀಡದಿದ್ದರೂ ಪರವಾಗಿಲ್ಲ. ಕಡೆ ಪಕ್ಷ ಸ್ಥಳೀಯ ಪೊಲೀಸರಿಗಾದರೂ ಮಾಹಿತಿ ನೀಡಿ ಅವರ ನೆರವು ಪಡೆಯಬೇಕಿತ್ತು. ಇದ್ಯಾವುದೂ ಇಲ್ಲದೆ ಶಸ್ತ್ರ ಸಜ್ಜಿತ ಸಿಆರ್‌ಪಿಎಫ್ ಯೋಧರ ಮೂಲಕ ದಾಳಿ ನಡೆಸುವ ಅಗತ್ಯವಾದರೂ ಏನಿತ್ತು ಎಂದು ಪತ್ರದಲ್ಲಿ ಅವರು ಪ್ರಶ್ನಿಸಿದ್ದಾರೆ.
ಈ ಹಿಂದೆ ದಾಳಿ ನಡೆದ ವೇಳೆ ಸಂಬಂಧಪಟ್ಟವರಿಗೆ ಮಾಹಿತಿ ನೀಡುವ ಸಂಪ್ರದಾಯವಿತ್ತು. ಆದರೆ ಈಗ ಐಟಿ ಅಧಿಕಾರಿಗಳು ಅತ್ಯಂತ ಗೌಪ್ಯವಾಗಿ ದಾಳಿ ನಡೆಸುತ್ತಿದ್ದಾರೆ. ರಾಜ್ಯದ ಪೊಲೀಸರ ಬಗ್ಗೆ ಕೇಂದ್ರಕ್ಕೆ ಯಾವುದಾದರೂ ದುರದ್ದೇಶವಿತ್ತೇ? ಅಂತ ಪತ್ರದಲ್ಲಿ ಸುಭಾಷ್‌ಚಂದ್ರ ಕೇಳಿದ್ದಾರೆ.







