ಪ್ರಣಯ್, ಸೌರಭ್ ಕ್ವಾರ್ಟರ್‌ಫೈನಲ್‌ಗೆ
ನ್ಯೂಝಿಲೆಂಡ್ ಓಪನ್

ಆಕ್ಲಂಡ್, ಆ.3: ಎಚ್.ಎಸ್. ಪ್ರಣಯ್ ಹಾಗೂ ಸೌರಭ್ ವರ್ಮ ನ್ಯೂಝಿಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಣಯ್ ಹಾಂಕಾಂಗ್‌ನ ವೀ ನ್ಯಾನ್ ವಿರುದ್ಧ 21-18, 21-19 ನೇರ ಗೇಮ್‌ಗಳಿಂದ ಗೆಲುವು ಸಾಧಿಸಿದ್ದಾರೆ. 2014ರ ಮಲೇಷ್ಯಾ ಓಪನ್‌ನಲ್ಲಿ ವೀಗೆ ಶರಣಾಗಿದ್ದ ಪ್ರಣಯ್ ಇಂದು ಅತ್ಯುತ್ತಮ ಪ್ರದರ್ಶನ ನೀಡಿ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ.
ಕಳೆದ ತಿಂಗಳು ಯುಎಸ್ ಓಪನ್ ಪ್ರಶಸ್ತಿ ಜಯಿಸಿರುವ ನಾಲ್ಕನೆ ಶ್ರೇಯಾಂಕದ ಪ್ರಣಯ್ 46 ನಿಮಿಷಗಳಲ್ಲಿ ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯ ಜಯಿಸಿದ್ದು ಮುಂದಿನ ಸುತ್ತಿನಲ್ಲಿ 11ನೆ ಶ್ರೇಯಾಂಕದ ಚೈನೀಸ್ ತೈಪೆಯ ಲಿನ್ ಯೂ ಸಿಯೆನ್‌ರನ್ನು ಎದುರಿಸಲಿದ್ದಾರೆ.
ಒಂದು ಗಂಟೆ ಹಾಗೂ ನಾಲ್ಕು ನಿಮಿಷಗಳ ಕಾಲ ನಡೆದಿದ್ದ ಮತ್ತೊಂದು ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಸಹ ಆಟಗಾರ ಪಾರುಪಲ್ಲಿ ಕಶ್ಯಪ್ ವಿರುದ್ಧ 21-18, 13-21, 21-16 ಗೇಮ್‌ಗಳ ಅಂತರದಿಂದ ಜಯ ಸಾಧಿಸಿರುವ ಏಳನೆ ಶ್ರೇಯಾಂಕದ ಸೌರಭ್ ವರ್ಮ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಭಾರತದ ಯುವ ಆಟಗಾರ ಸಿರಿಲ್ ವರ್ಮ ಚೈನೀಸ್ ತೈಪೆಯ ಚಿಯಾ ಹುಂಗ್ ವಿರುದ್ಧ 13-21, 14-21 ಅಂತರದಿಂದ ಸೋಲುವ ಮೂಲಕ ಟೂರ್ನಿಯಿಂದ ಹೊರ ನಡೆದಿದ್ದಾರೆ.





