ಉಪನ್ಯಾಸಕರ ಅಮಾನತಿಗೆ ನಗರ ಬಿಜೆಪಿ ಒತ್ತಾಯ

ಮಡಿಕೇರಿ, ಆ.4: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿನಿಯರಿಗೆ ಉದ್ಯೋಗದ ಆಮಿಷವೊಡ್ಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪ ಎದುರಿಸುತ್ತಿರುವ ಉಪನ್ಯಾಸಕರೊಬ್ಬರನ್ನು ತಕ್ಷಣ ಅಮಾನತುಗೊಳಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಮಡಿಕೆೇರಿ ನಗರ ಬಿಜೆಪಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ, ಉದ್ಯೋಗ ನೀಡುವುದಾಗಿ ಬಂದ ವ್ಯಕ್ತಿಗಳ ಪೂರ್ವಾಪರ ತಿಳಿಯದೆ ಅವಕಾಶ ಕಲ್ಪಿಸಿದ ಪ್ರಾಂಶುಪಾಲರು ಈ ಬೆಳವಣಿಗೆಗೆ ನೇರ ಹೊಣೆಯೆಂದು ಆರೋಪಿಸಿದರು. ಪ್ರಕರಣದಲ್ಲಿ ಉಪನ್ಯಾಸಕರೊಬ್ಬರು ಶಾಮೀಲಾಗಿರುವ ಬಗ್ಗೆ ಆರೋಪಗಳು ಕೇಳಿಬಂದಿದೆ. ಈ ಉಪನ್ಯಾಸಕರ ವಿರುದ್ಧ ಕಾಲೇಜು ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಮುಂದಿನ 10 ದಿನಗಳ ಒಳಗಾಗಿ ಉಪನ್ಯಾಸಕರ ವಿರುದ್ಧ ಮೊಕದ್ದಮೆ ದಾಖಲಿಸಿ ವಿಚಾರಣೆಗೆ ಒಳಪಡಿಸದಿದ್ದಲ್ಲಿ ವಂಚನೆಗೆ ಒಳಗಾದ ವಿದ್ಯಾರ್ಥಿನಿಯರ ಪೋಷಕರ ಸಹಕಾರದೊಂದಿಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಮಹೇಶ್ ಜೈನಿ ಎಚ್ಚರಿಕೆ ನೀಡಿದರು.
ವಿದ್ಯಾರ್ಥಿನಿಯರನ್ನು ವಂಚಿಸಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿರುವ ಬಗ್ಗೆಯೂ ಖಚಿತ ಮಾಹಿತಿ ಇದ್ದು, ಕೇವಲ ವಿದ್ಯಾರ್ಥಿನಿಯರನ್ನೆ ಆಯ್ಕೆ ಮಾಡಿಕೊಂಡಿರುವ ಈ ವ್ಯಕ್ತಿಗಳ ಹಿಂದೆ ದೊಡ್ಡ ಜಾಲ ಇರುವ ಬಗ್ಗೆ ಶಂಕೆ ಇದೆ. ಇದನ್ನು ತೀವ್ರ ತನಿಖೆೆಗೆ ಒಳಪಡಿಸಬೇಕೆಂದು ಒತ್ತಾಯಿಸಿದ ಮಹೇಶ್ ಜೈನಿ, ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಗಾಂಜಾ ದಂಧೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದರು.
ಕಾರ್ಯಪ್ಪ ಕಾಲೇಜಿನಲ್ಲಿ ಕೆಲವು ಉಪನ್ಯಾಸಕರು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ವಿದ್ಯಾರ್ಥಿಗಳಲ್ಲಿ ಗೊಂದಲವನ್ನು ಸೃಷ್ಟಿಸುತ್ತಿರುವ ಬೆಳವಣಿಗೆ ಕಂಡು ಬಂದಿದೆ. ಇದನ್ನು ನಗರ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಉಪನ್ಯಾಸಕರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಹೇಶ್ ಜೈನಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಉಮೇಶ್ ಸುಬ್ರಮಣಿ, ಮಹಿಳಾ ಮೋರ್ಚಾದ ನಗರಾಧ್ಯಕ್ಷರಾದ ಅನಿತಾ ಪೂವಯ್ಯ, ಟೌನ್ ಬ್ಯಾಂಕ್ ಅಧ್ಯಕ್ಷರಾದ ಬಿ.ಕೆ. ಜಗದೀಶ್, ಯುವ ಮೋರ್ಚಾದ ರಾಜ್ಯ ಸಮಿತಿ ಸದಸ್ಯ ಬಿ.ಎಸ್. ಪ್ರಶಾಂತ್ ಹಾಗೂ ಯುವ ಮೋರ್ಚಾದ ನಗರ ಪ್ರಧಾನ ಕಾರ್ಯದರ್ಶಿ ಕೆ.ವಿ. ರಾಜೇಶ್ ಉಪಸ್ಥಿತರಿದ್ದರು.







