ಬೆಳೆವಿಮೆ ಪಾವತಿ ದಿನಾಂಕವನ್ನು ಮುಂದೂಡುವಂತೆ ಒತ್ತಾಯಿಸಿ ಮನವಿ

ಸೊರಬ, ಆ.4 : ತಾಲೂಕು ಸತತವಾಗಿ ಬರಗಾಲಕ್ಕೆ ತುತ್ತಾಗಿದ್ದು, ರೈತರು ಬೆಳೆವಿಮೆ ಕಟ್ಟಲು ಹಣದ ಕೊರತೆ ಎದುರಿಸುತ್ತಿದ್ದಾರೆ. ಬೆಳೆವಿಮೆ ಕಟ್ಟಲು ಅಗಷ್ಟ್ 14ರ ಕೊನೆಯ ದಿನಾಂಕದ ಬದಲಿಗೆ ಸೆಪ್ಟೆಂಬರ್ 14ರ ವರೆಗೆ ಒಂದು ತಿಂಗಳು ಮುಂದೂಡಬೇಕೆಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ.ಮಂಜುನಾಥಗೌಡ ಒತ್ತಾಯಿಸಿದರು.
ಶುಕ್ರವಾರ ಪಟ್ಟಣದ ಕೃಷಿ ಇಲಾಖೆಯ ಮುಂಭಾಗದಲ್ಲಿ ಬೆಳೆವಿಮೆ ಕಟ್ಟುವ ದಿನಾಂಕವನ್ನು ಮುಂದೂಡುವಂತೆ ಒತ್ತಾಯಿಸಿ ಕೃಷಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿ, ರೈತರು ಸತತವಾಗಿ ಕಳೇದ ಮೂರು ವರ್ಷಗಳಿಂದ ಬರಗಾಲವನ್ನು ಎದುರಿಸುತ್ತಿದ್ದಾರೆ. 2015-16ರ ಬೆಳೆವಿಮೆ ರೈತರಿಗೆ ಇದುವರೆಗೂ ಸಂದಾಯವಾಗಿರುವುದಿಲ್ಲ. 2016-17ರ ಬೆಳೆವಿಮೆಯು ಕೆಲವೇ ಕೆಲವು ರೈತರಿಗೆ ಮಾತ್ರ ಸಿಕ್ಕಿದೆ. ಖಾಸಗಿ ಏಜೆನ್ಸಿ ಅವರ ಬೇಜವಾಬ್ದಾರಿತನದಿಂದ ರೈತರು ಬೆಳೆವಿಮೆ ಸಿಗದೆ ಕಂಗಾಲಾಗಿದ್ದಾರೆ. ರೈತರು ಸರ್ಕಾರದ ಸವಲತ್ತುಗಳನ್ನು ಪಡೆಯಲು ಕಚೇರಿಗಳಲ್ಲಿ ಮಾಹಿತಿ ಕೇಳಿದರೆ ಕಂಪ್ಯೂಟರ್‌ಗಳು ಕೆಲಸ ನಿರ್ವಹಿಸುತ್ತಿಲ್ಲ ಎಂದು ಸಬೂಬು ಹೇಳುವ ಅಧಿಕಾರಿಗಳು, ತಮ್ಮ ಟಿಎ, ಡಿಎ ಮಂಜೂರು ಮಾಡಿಕೊಳ್ಳವ ಸಮಯದಲ್ಲಿ ಯಾವಾಗಲೂ ಕಂಪ್ಯೂಟರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದ ಅವರು, ತಕ್ಷಣ ಅಧಿಕಾರಿಗಳು ಯಾವ ಸಬೂಬು ಹೇಳದೆ ರೈತರಿಗೆ ಸೂಕ್ತ ಸಮಯದಲ್ಲಿ ಕೆಲಸ ಮಾಡಿಕೊಡಬೇಕೆಂದು ಆಗ್ರಹಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಉಮೇಶ್.ಎನ್.ಪಾಟೀಲ್ ಮಾತನಾಡಿದರು. ಜಿಲ್ಲಾ ಸಂಚಾಲಕ ವೀರಭದ್ರಗೌಡ, ತಾಲೂಕು ಉಪಾಧ್ಯಕ್ಷರಾದ ಆನಂದ ನಾಯ್ಕ, ಈಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಇಂದೂಧರ್, ಪ್ರಮುಖರಾದ ಸದಾನಂದ.ಕೆ, ಶಿವಕುಮಾರ್, ಹನುಮಂತಪ್ಪ, ನಾಗರಾಜ್ ಮತ್ತಿತರರಿದ್ದರು.





