ಸುಗ್ರೀವಾಜ್ಞೆ ಹೊರಡಿಸಲು ಎಸ್ಸಿ-ಎಸ್ಟಿ ನೌಕರರ ಮನವಿ
ಪರಿಶಿಷ್ಟರ ಭಡ್ತಿ ಮೀಸಲಾತಿ
ಬೆಂಗಳೂರು, ಆ. 4: ಪರಿಶಿಷ್ಟರ ಮುಂಭಡ್ತಿ ಮೀಸಲಾತಿ ಸಂರಕ್ಷಣೆಗಾಗಿ ಕೂಡಲೇ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್ ನೇತೃತ್ವದ ನಿಯೋಗ ಸಚಿವ ಸಂಪುಟ ಉಪ ಸಮಿತಿಗೆ ಮನವಿ ಸಲ್ಲಿಸಿದೆ.
ಸಂವಿಧಾನದ 77ನೆ ತಿದ್ದುಪಡಿಯಲ್ಲಿ ಎಲ್ಲ ವೃಂದಗಳಲ್ಲಿಯೂ ಮೀಸಲಾತಿ ಅವಕಾಶ ಕಲ್ಪಿಸಲಾಗಿದೆ. ಅದರನ್ವಯ 1995ರಿಂದ ಪೂರ್ವಾನ್ವಯ ಆಗುವಂತೆ ಎಲ್ಲ ವೃಂದಗಳಲ್ಲಿ ಭಡ್ತಿ ಮೀಸಲಾತಿಗೆ ಅವಕಾಶ ಕಲ್ಪಿಸಬೇಕು. 1978ರ ಸರಕಾರದ ಆದೇಶವನ್ನು ತಿದ್ದುಪಡಿ ಮಾಡಬೇಕು.
ಬ್ಯಾಕ್‌ಲಾಗ್ ಹುದ್ದೆಗಳಿಗೆ ಭಡ್ತಿ ಮೀಸಲಾತಿ ನೀಡಿದಾಗ, ಮೆರಿಟ್ ಆಧಾರದ ಮೇಲೆ ಮುಂಭಡ್ತಿ ಹೊಂದಿದ ಪರಿಶಿಷ್ಟ ಅಧಿಕಾರಿ-ನೌಕರರನ್ನು ಹಾಗೂ ಸಾಮಾನ್ಯ ಜೇಷ್ಠತೆಯ ಹಿರಿತನದ ಆಧಾರದ ಮೇಲೆ ಮುಂಭಡ್ತಿ ಹೊಂದಿದ ಪರಿಶಿಷ್ಟ ಅಧಿಕಾರಿ ಮತ್ತು ನೌಕರರನ್ನು ಶೇ.18ರ ಮೀಸಲಾತಿಯಲ್ಲಿ ಸೇರಿಸದೆ ಪ್ರತ್ಯೇಕವಾಗಿ ಪರಿಗಣಿಸಬೇಕು.
ಈಗಾಗಲೇ ಮುಂಭಡ್ತಿ ಪಡೆದ ಅಧಿಕಾರಿಗಳು ಮತ್ತು ನೌಕರರನ್ನು ಅದೇ ಹುದ್ದೆಯಲ್ಲೆ ಮುಂದುವರಿಸಲು ಕಾಯ್ದೆ ರೂಪಿಸಬೇಕು. ಅಲ್ಲದೆ, ಸುಪ್ರೀಂ ಕೋರ್ಟ್ ತೀರ್ಪಿನಿಂದ ಉಂಟಾಗಿರುವ ತೊಡಕನ್ನು ನಿವಾರಿಸಲು ಸುಗ್ರೀವಾಜ್ಞೆ ಕರಡಿನಲ್ಲಿ ಮೇಲ್ಕಂಡ ಅಂಶಗಳನ್ನು ಪರಿಗಣಿಸಬೇಕೆಂದು ಮನವಿ ಸಲ್ಲಿಸಲಾಗಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.







