ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸುಲಿಗೆ
ಬೆಂಗಳೂರು, ಆ.4:ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸುಲಿಗೆ ಮಾಡಿರುವ ಘಟನೆ ಇಲ್ಲಿನ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಂದಿರಾನಗರದ ಐಎಫ್‌ಐಎಕ್ಸ್ ಆಪಲ್ ಫೋನ್ ಸರ್ವಿಸ್ ಸೆಂಟರ್‌ನಲ್ಲಿ ಡೆಲಿವರಿ ಬಾಯ್ ಆಗಿದ್ದ ಜಾವಿದ್ ಎಂಬಾತನನ್ನು ಅಡ್ಡಗಟ್ಟಿದ ಐದಾರು ಮಂದಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು 85 ಸಾವಿರ ರೂ. ನಗದು 2 ಆಪಲ್ ಲ್ಯಾಪ್‌ಟಾಪ್, ಮೊಬೈಲ್ ಕಸಿದು ಪರಾರಿಯಾಗಿದ್ದಾರೆಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಘಟನೆ ವಿವರ: ಜು.31 ರಂದು ಮಧ್ಯಾಹ್ನ 12ರ ವೇಳೆ ಕಮ್ಮನಹಳ್ಳಿಯ ಸರ್ವಿಸ್‌ಗೆ ನೀಡಿದ್ದ ಎರಡು ಆಪಲ್ ಲ್ಯಾಪ್‌ಟಾಪ್‌ಗಳು ಹಾಗೂ 85 ಸಾವಿರ ನಗದನ್ನು ಬ್ಯಾಗಿನಲ್ಲಿಟ್ಟುಕೊಂಡು ಅಂಗಡಿಗೆ ಪಲ್ಸರ್ ಬೈಕ್‌ನಲ್ಲಿ ಜಾವದ್ ಬರುತ್ತಿದ್ದರು ಎನ್ನಲಾಗಿದೆ.
ಮಾರ್ಗ ಮಧ್ಯೆ ಬೈಯಪ್ಪನಹಳ್ಳಿ ರೈಲ್ವೆ ಗೇಟ್ ಬಳಿ ಬರುತ್ತಿದ್ದಾಗ ಕಾದು ಕುಳಿತಿದ್ದ ಐವರು ದುಷ್ಕರ್ಮಿಗಳು ಏಕಾಏಕಿ ಬಂದು ಬೈಕ್‌ನ್ನು ಅಡ್ಡಗಟ್ಟಿ ಎಲ್ಲಿಗೆ ಹೋಗುತ್ತಿದ್ದೀಯ, ಏನು ಕೆಲಸ ಮಾಡುತ್ತೀಯಾ ಎಂದು ಪ್ರಶ್ನಿಸುತ್ತ ಬ್ಯಾಗ್‌ನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ.ಇದಕ್ಕೆ ಪ್ರತಿರೋಧ ತೋರಿದ ಜಾವದ್‌ನ ಬಲಗೈ ಹಾಗೂ ತಲೆಗೆ ಚಾಕುವಿನಿಂದ ಇರಿದು, ಬ್ಯಾಗ್, ನಗದು ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಜಾವಿದ್ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಸ್ಥಳೀಯರೊಬ್ಬರಿಂದ ಮೊಬೈಲ್ ಪಡೆದು ಅಣ್ಣನಿಗೆ ಕರೆ ಮಾಡಿ ವಿಷಯ ತಿಳಿಸಿ ಕುಸಿದು ಬಿದ್ದಿದ್ದಾರೆ. ಅಷ್ಟರಲ್ಲಿ ಅದೇ ಮಾರ್ಗವಾಗಿ ಬಂದ ಪೊಲೀಸರು ಜಾವಿದ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಐಎಫ್‌ಐಎಕ್ಸ್ ಆಪಲ್ ಫೋನ್ ಸರ್ವಿಸ್ ಸೆಂಟರ್ ಮಾಲಕ ರಾಜು ಬೈಯಪ್ಪನಹಳ್ಳಿ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.





