ಕಾನೂನು-ಸುವ್ಯವಸ್ಥೆಗೆ ಭಂಗ ಉಂಟು ಮಾಡುವವರ ವಿರುದ್ದ ಕಠಿಣ ಕ್ರಮದ ಎಚ್ಚರಿಕೆ
ಶಿವಮೊಗ್ಗದಲ್ಲಿ ಗಣೇಶೋತ್ಸವದ ವೇಳೆ ಜಿಲ್ಲಾಡಳಿತದಿಂದ ಹೈ ಅಲರ್ಟ್

ಶಿವಮೊಗ್ಗ, ಆ. 4: ಜಿಲ್ಲೆಯಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಗಣೇಶೋತ್ಸವ ಪೂರ್ವಭಾವಿಯಾಗಿ ನಡೆಸಿದ ಕಾನೂನು ಸುವ್ಯವಸ್ಥೆ ಪಾಲನೆ ಕುರಿತಾದ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಗಣೇಶೋತ್ಸವವನ್ನು ಶಾಂತಿಯುತವಾಗಿ ಆಚರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಗಣೇಶೋತ್ಸವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗುವುದು. ಹೆಚ್ಚುವರಿಯಾಗಿ ಬೇರೆ ಜಿಲ್ಲೆಗಳಿಂದ ಸಹ ಪೊಲೀಸ್ ತುಕಡಿಯನ್ನು ಕರೆಯಿಸಲಾಗುವುದು. ಜಿಲ್ಲೆಯಲ್ಲಿ 2800 ರೌಡಿಶೀಟರ್‌ಗಳಿದ್ದು, 650 ಕೋಮು ಗೂಂಡಾಗಳಿದ್ದಾರೆ. ಇವರೆಲ್ಲರಿಗೂ ಎಚ್ಚರಿಕೆ ನೀಡಿ ಬಾಂಡ್ ಬರೆಯಿಸುವ ಕಾರ್ಯವನ್ನು ಆರಂಭಿಸಲಾಗಿದೆ ಎಂದರು.
ಸಮಾಜ ಘಾತುಕ ಶಕ್ತಿಗಳನ್ನು ಗುರುತಿಸಿ ಮುನ್ನಚ್ಚರಿಕೆ ಕ್ರಮವಾಗಿ ಬಂಧಿಸಲಾಗುವುದು. ಗಡಿಪಾರು ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ ಅಂತವರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಲಾಗುವುದು ಎಂದು ಸ್ಪಷ್ಟಪಡಿಸಿದ ಪೊಲೀಸ್ ವರಿಷ್ಠ ಅಭಿನವ್ ಖರೆ, ಹೊಸದಾಗಿ ಯಾವುದೇ ಗಣಪತಿ ಪ್ರತಿಷ್ಠಾಪನೆ, ಅಲಂಕಾರ, ಮೆರವಣಿಗೆ ಇತ್ಯಾದಿ ಆಚರಣೆಗಳಿಗೆ ಅನುಮತಿ ನೀಡಲಾಗುವುದಿಲ್ಲ. ಹಿಂದಿನ ವರ್ಷದಷ್ಟೇ ಪ್ರಮಾಣದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಲಾಗುವುದು. ಶಿವಮೊಗ್ಗ ನಗರದಲ್ಲಿ ಹೊಸದಾಗಿ ಈ ಬಾರಿ ಸೌಹಾರ್ದ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ಡಿಜೆ, ಬಂಟಿಂಗ್ಸ್, ಫ್ಲೆಕ್ಸ್ ನಿಷೇಧ: ಕಳೆದ ವರ್ಷದಂತೆ ಈ ಬಾರಿಯೂ ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಂಟಿಂಗ್ಸ್, ಫ್ಲೆಕ್ಸ್ ಕಟ್ಟುವುದಕ್ಕೆ ಅವಕಾಶವಿಲ್ಲ. ಹೊಸ ಮಾರ್ಗದಲ್ಲಿ ಮೆರವಣಿಗೆ ಸಾಗಲು ಅನುಮತಿ ನೀಡಲಾಗುವುದಿಲ್ಲ. ಮೈಕ್, ವಿದ್ಯುತ್ ಸಂಪರ್ಕ ಇತ್ಯಾದಿಗಳಿಗೆ ಅನುಮತಿಯನ್ನು ಪಡೆಯಲು ಏಕ ಗವಾಕ್ಷಿ ಅನುಮತಿ ಕೇಂದ್ರವನ್ನು ಆರಂಭಿಸಲಾಗುವುದು ಎಂದರು.
10 ಗಂಟೆಯೊಳಗೆ ಮುಕ್ತಾಯ: ಗಣಪತಿ ವಿಸರ್ಜನೆ ಕಾರ್ಯವನ್ನು ರಾತ್ರಿ 10ಗಂಟೆಯೊಳಗಾಗಿ ಕಡ್ಡಾಯವಾಗಿ ಮುಗಿಸಬೇಕು. ಯಾವುದೇ ಕಾರಣಕ್ಕೆ ಸಮಯ ವಿಸ್ತರಿಸಲು ಅವಕಾಶ ನೀಡುವುದಿಲ್ಲ. ಕಳೆದ ವರ್ಷ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಅನಾಹುತ ಸಂಭವಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ತೆಪ್ಪ, ದೋಣಿ ಇತ್ಯಾದಿಗಳಲ್ಲಿ ತೆರಳಿ ನದಿ, ಕೆರೆಗಳ ಮಧ್ಯೆ ವಿಸರ್ಜನೆಗೆ ಅನುಮತಿ ನೀಡುವುದಿಲ್ಲ. ಕಿನಾರೆಯಲ್ಲಿಯೇ ಗಣಪತಿ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಮೆರವಣಿಗೆ ಸುಗಮವಾಗಿ ಹಾದು ಹೋಗಲು ಬಿಗಿ ಭದ್ರತಾ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ನಿಕಟ ಸಂಪರ್ಕದಲ್ಲಿದ್ದು ಕಾರ್ಯನಿರ್ವಹಿಸಬೇಕು. ಪ್ರತಿಯೊಂದು ಬೆಳವಣಿಗೆಗಳ ಬಗ್ಗೆ ಮಾಹಿತಿಯನ್ನು ಪಡೆದು ಕಟ್ಟೆಚ್ಚರ ವಹಿಸಬೇಕು. ಆಯೋಜಕರೊಂದಿಗೆ ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಸೂಕ್ತ ನಿರ್ದೇಶನ ಹಾಗೂ ಕಠಿಣ ಎಚ್ಚರಿಕೆ ನೀಡಬೇಕು. ಸಣ್ಣಪುಟ್ಟ ಅಹಿತಕರ ಘಟನೆಗಳಿಗೂ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಮುತ್ತುರಾಜ್, ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ, ಹಿರಿಯ ಪೊಲೀಸ್ ಅಧಿಕಾರಿಗಳು, ತಹಶೀಲ್ದಾರ್‌ಗಳು ಸಭೆಯಲ್ಲಿ ಹಾಜರಿದ್ದರು.
ಪ್ರಮುಖಾಂಶಗಳು:-
* ಹೊಸದಾಗಿ ಯಾವುದೇ ಗಣಪತಿ ಪ್ರತಿಷ್ಠಾಪನೆ, ಅಲಂಕಾರ, ಮೆರವಣಿಗೆ ಇತ್ಯಾದಿ ಆಚರಣೆಗಳಿಗೆ ಅನುಮತಿ ಇಲ್ಲ.
* ಸೌಹಾರ್ದ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲು ಸಾಧ್ಯವಿಲ್ಲ * ಬಂಟಿಂಗ್ಸ್, ಫ್ಲೆಕ್ಸ್ ಕಟ್ಟುವುದಕ್ಕೆ ಅವಕಾಶವಿಲ್ಲ. * ಹೊಸ ಮಾರ್ಗದಲ್ಲಿ ಮೆರವಣಿಗೆ ಸಾಗಲು ಅನುಮತಿ ನೀಡಲಾಗುವುದಿಲ್ಲ. * ಸುರಕ್ಷತೆಗಾಗಿ ಹೆಚ್ಚುವರಿಯಾಗಿ ಬೇರೆ ಜಿಲ್ಲೆಗಳಿಂದ ಸಹ ಪೊಲೀಸ್ ತುಕಡಿಯನ್ನು ಕರೆಯಿಸಲಾಗುವುದು.
* ನದಿ, ಕೆರೆಗಳ ಮಧ್ಯೆ ವಿಸರ್ಜನೆಗೆ ಅನುಮತಿ ಇಲ್ಲ
* ಏನಾದರೂ ಅನಾಹುತಗಳು ಸಂಭವಿಸಿದರೆ ಆಯೋಜಕರನ್ನು ನೇರ ಹೊಣೆ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಸಿ.ಸಿ.ಕ್ಯಾಮರಾ ಅಳವಡಿಕೆ







