ಸರಕು ಮತ್ತು ಸೇವಾ ತೆರಿಗೆ ಕುರಿತು ಅರಿವು ಕಾರ್ಯಾಗಾರ

ದಾವಣಗೆರೆ, ಆ.4: ಜಿ.ಎಸ್.ಟಿ ಗ್ರಾಹಕ ಸ್ನೇಹಿಯಾಗಿದ್ದು, ವ್ಯಾಪಾರಿಗಳು ಹಾಗೂ ಗ್ರಾಹಕರ ನಡುವೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಿರುವಂತಹ ಒಂದು ತೆರಿಗೆ ನೀತಿಯಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಛೇರಿ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಗ್ರಾಹಕರಿಗೆ ಸರಕು ಮತ್ತು ಸೇವಾ ತೆರಿಗೆ ಕುರಿತು ಅರಿವು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದುವರೆಗೆ ನಾವು ತೆರಿಗೆ ಕಟ್ಟುತ್ತಿರುವುದೇ ತಿಳಿಯುತ್ತಿರಲಿಲ್ಲಾ. ನಾವು ತೆರಿಗೆ ನೀಡಿದಂತೆ ಮನಸ್ಸಿಗೆ ಭಾಸವಾಗುತ್ತಿರಲಿಲ್ಲ. ಆದರೂ ನಾವು ದಿನನಿತ್ಯ ತೆರಿಗೆ ಕಟ್ಟುತ್ತಲ್ಲೇ ಇದೇವು. ಆದರೆ ಜಿ.ಎಸ್.ಟಿ ಜಾರಿಗೊಂಡ ಮೇಲೆ ನಾವು ಕಟ್ಟುತ್ತಿರುವ ತೆರಿಗೆ ನಮ್ಮ ಗಮನಕ್ಕೆ ಬರುತ್ತಿದೆ ಎಂದರು. ಯಾವುದೇ ಒಂದು ವಸ್ತು ತಯಾರಿಸುವವರಿಗೆ ಅದರ ಸಂಕಷ್ಟ ಗೊತ್ತಿರುತ್ತದೆ. ವಸ್ತು ತಯಾರಕ ಪ್ರತಿ ಹಂತದಲ್ಲೂ ತೆರಿಗೆ ಕಟ್ಟುತ್ತಿರುತ್ತಾನೆ. ಅವನು ಒಂದು ವಸ್ತು ತಯಾರಿಸಲು ಬೇಕಾಗುವ ಕಚ್ಚಾವಸ್ತುಗಳಿಂದ ಹಿಡಿದು ಅದು ಮಾರುಕಟ್ಟೆಗೆ ಹೋಗುವವರೆಗೆ ವಿವಿಧ ಹಂತಗಳಲ್ಲಿ ತೆರಿಗೆ ಕಟ್ಟುತ್ತಿರುತ್ತಾನೆ. ಆ ಎಲ್ಲ ತೆರಿಗೆಗಳನ್ನು ಸೇರಿಸಿ ಗ್ರಾಹಕರ ಮೇಲೆ ಹಾಕಿದಾಗ ಗ್ರಾಹಕರಿಗೆ ಹೊರೆ ಆಗುತ್ತಿತ್ತು. ಅವನ ಉತ್ಪನ್ನ ತಯಾರಾದ ಮೇಲೆ ಮಾರಾಟ ತೆರಿಗೆ, ಸೇವಾ ತೆರಿಗೆ ಹೀಗೆ ಅನೇಕ ತೆರಿಗೆಗಳು ಬೀಳುತ್ತಿದ್ದವು. ಆದರೆ ಇನ್ನು ಮುಂದೆ ಹೀಗಾಗುವುದಿಲ್ಲ ಎಂದರು.
ಆದರೂ ನಮ್ಮಲ್ಲೊಂದು ಪ್ರಶ್ನೆ ಉಳಿದುಕೊಂಡಿದೆ. ಜಿ.ಎಸ್.ಟಿ ಜಾರಿಯಾಗಿದೆ. ಆದರೆ ವಸ್ತುಗಳ ಬೆಲೆಗಳು ಕಡಿಮೆಯಾಗಿವೆಯೇ? ಸದ್ಯಕ್ಕೆ ಆ ರೀತಿ ಕಾಣಿಸದಿದ್ದರೂ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಗೋಚರವಾಗಲಿದೆ ಎಂದರು.
ಇಂದಿನ ಕಾರ್ಯಾಗಾರ ಗ್ರಾಹಕ ವಸ್ತುವೊಂದನ್ನು ಕೊಂಡಾಗ ಏನು ಗಮನಿಸಬೇಕು. ಅದರಲ್ಲಿ ಮೋಸ ಹೋದರೆ ಏನು ಮಾಡಬೇಕು. ಇದರಲ್ಲಿ ಗ್ರಾಹಕರ ಪಾತ್ರವೇನು? ವ್ಯಾಪಾರಿಗಳ ಪಾತ್ರವೇನು? ಒಟ್ಟಾರೆ ದೇಶದ ಬೆಳವಣಿಗೆಯಲ್ಲಿ ಜಿ.ಎಸ್.ಟಿ ಹೇಗೆ ಪರಿಣಾಮಕಾರಿ ಎಂಬ ನಿಟ್ಟಿನಲ್ಲಿ ನಡೆಯುತ್ತಿರುವ ಕಾರ್ಯಾಗಾರ ಎಲ್ಲರಿಗೂ ಸದುಪಯೋಗವಾಗಲಿ ಎಂದು ಆಶಿಸಿದರು.







