ದಾವಣಗೆರೆ: ಸಿಐಟಿಯು ಜಾಥಾಗೆ ಸ್ವಾಗತ

ದಾವಣಗೆರೆ, ಆ.4: ರಾಜ್ಯಾದ್ಯಂತ 18 ಸಾವಿರ ರೂ. ಸಮಾನ ಕನಿಷ್ಟ ವೇತನ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಚಿಕ್ಕಬುಳ್ಳಾಪುರದ ವಿದುರಾಶ್ವತ್ಥದಿಂದ ಹೊರಟ ಸಿಐಟಿಯು ಜಾಥಾಗೆ ನಗರದಲ್ಲಿ ಸಂಘಟನೆಯಿಂದ ಸ್ವಾಗತಿಸಲಾಯಿತು.
ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿ ಸಿಐಟಿಯು ಜಾಥಾಗೆ ಸ್ವಾಗತಿಸಿದ ಸಂಘಟನೆ ಮುಖಂಡರು, ಕಾರ್ಯಕರ್ತರೊಂದಿಗೆ ಜಯದೇವ ವೃತ್ತದಲ್ಲಿ ಬೀದಿ ನಾಟಕದ ಜೊತೆಗೆ ಬಹಿರಂಗ ಸಭೆ ನಡೆಸುವ ಮೂಲಕ ಜನಾರಿವು ಮೂಡಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ, ಏಕ ದೇಶ, ಏಕ ಭಾಷೆ, ಏಕ ತೆರಿಗೆ ಇತ್ಯಾದಿ ಪೊಳ್ಳು ಘೋಷಣೆಯಿಂದ ಜನರನ್ನ ಮರಳು ಮಾಡುತ್ತಿರುವ ಮೋದಿ ಸರ್ಕಾರವು ದೇಶದ ಎಲ್ಲಾ ಕಾರ್ಮಿಕರಿಗೂ ಕನಿಷ್ಟ 18 ಸಾವಿರ ರು. ವೇತನ ನಿಗದಿ
ಪಡಿಸಿ, ಗುತ್ತಿಗೆ ಕಾರ್ಮಿಕರ ಸೇವೆ ಕಾಯಂಗೊಳಿಸಲಿ ಎಂದು ಒತ್ತಾಯಿಸಿದ ಅವರು, ದುಡಿಯುವ ಎಲ್ಲಾ ಕಾರ್ಮಿಕರಿಗೆ ಪಿಂಚಣಿ, ಇಎಸ್‌ಐ ಮತ್ತಿತರೆ ಸಾಮಾಜಿಕ ಭದ್ರತೆ ಒದಗಿಸಲಿ. ಸರ್ಕಾರ ದುಡಿಯುವ ವರ್ಗದ ಬೇಡಿಕೆ ಈಡೇರಿಸುವವರೆಗೂ ನಿರಂತರ ಹೋರಾಟ ನಡೆಸಲಾಗುವುದು. ಸಿಐಟಿಯು ಇತರೆ ಕಾರ್ಮಿಕ ಸಂಘಟನೆಗಳು ಆ.8ಕ್ಕೆ ನವದೆಹಲಿಯ ತಾಲ್ ಕಟೋರ ಸ್ಟೇಡಿಯಂನಲ್ಲಿ ಸಮಾವೇಶ ನಡೆಸಿ, ಹೋರಾಟದ ರೂಪುರೇಷೆ ನಿರ್ಧರಿಸಲಿವೆ ಎಂದು ಅವರು ತಿಳಿಸಿದರು.
ಸಂಘಟನೆ ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್, ಸಂಘಟನೆ ಮುಖಂಡ ಸೈಯದ್ ಮುಜೀಬ್, ಆಟೋ ರಿಕ್ಷಾ ಚಾಲಕರ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಬಿ. ರಾಘವೇಂದ್ರ ಮಾತನಾಡಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಶ್ರೀನಿವಾಸಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕೆ.ಎಲ್.ಭಟ್, ತಿಮ್ಮಣ್ಣ, ಹರೀಶ ನಾಯ್ಕ, ಈರಣ್ಣ, ಆನಂದರಾಜು, ಉಮೇಶ ಕೈದಾಳೆ ಇದ್ದರು. ಸಂಘಟನೆಯ ಲೋಕೇಶ ನಾಯ್ಕ, ರಫೀಕ್, ಉಬೇದುಲ್ಲಾ, ರೇಣುಕಮ್ಮ, ಇ.ಶ್ರೀನಿವಾಸ, ನವೀನಕುಮಾರ, ಗಿರೀಶ, ಅಣ್ಣಪ್ಪಸ್ವಾಮಿ, ಅನ್ವರ್ ಸಾಬ್, ರವಿ ಮೆರವಣಿಗೆಯಲ್ಲಿ ಸಾಗಿದರು.







