ಅಮೆರಿಕದ 3 ಉನ್ನತ ಹುದ್ದೆಗಳಿಗೆ ಭಾರತೀಯ ಅಮೆರಿಕನ್ನರ ನೇಮಕ

ವಾಶಿಂಗ್ಟನ್, ಆ. 4: ಅಮೆರಿಕ ಸರಕಾರದ ಮೂರು ಉನ್ನತ ಹುದ್ದೆಗಳಿಗೆ ಮಾಡಲಾಗಿರುವ ಭಾರತೀಯ ಅಮೆರಿಕನ್ನರ ನೇಮಕವನ್ನು ಸೆನೆಟ್ ಅವಿರೋಧವಾಗಿ ಅನುಮೋದಿಸಿದೆ.
ಫೆಡರಲ್ ಇಂಧನ ನಿಯಂತ್ರಣ ಆಯೋಗದ ಸದಸ್ಯರಾಗಿ ನೀಲ್ ಚಟರ್ಜಿ, ಬೌದ್ಧಿಕ ಆಸ್ತಿ ಜಾರಿ ಸಮನ್ವಯಕಾರನಾಗಿ ವಿಶಾಲ್ ಅಮೀನ್ ಮತ್ತು ಪೆರು ದೇಶಕ್ಕೆ ಅಮೆರಿಕದ ರಾಯಭಾರಿಯಾಗಿ ಕೃಷ್ಣ ಅರಸ್‌ರ ನೇಮಕಾತಿಗಳನ್ನು ಸೆನೆಟ್ ಖಚಿತಪಡಿಸಿದೆ.
ಈ ಪೈಕಿ ಬೌದ್ಧಿಕ ಆಸ್ತಿ ಜಾರಿ ಸಮನ್ವಯಕಾರ ಹುದ್ದೆಯು ಮಹತ್ವದ್ದಾಗಿದ್ದು, ಈ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕಗಳ ನಡುವೆ ತೀವ್ರ ಭಿನ್ನಾಭಿಪ್ರಾಯವಿದೆ.
1986ರಿಂದ ವಿದೇಶಿ ಸೇವೆ ಅಧಿಕಾರಿ ಆಗಿರುವ ಅರಸ್, ನಿಕ್ಕಿ ಹೇಲಿ ಬಳಿಕ ಅಮೆರಿಕದ ರಾಯಭಾರಿ ಹುದ್ದೆಗೆ ನೇಮಕಗೊಂಡ ಎರಡನೆ ಭಾರತೀಯ ಅಮೆರಿಕನ್ ಆಗಿದ್ದಾರೆ.
ಎರಡು ಬಾರಿ ಸೌತ್ ಕ್ಯಾರಲೈನದ ಗವರ್ನರ್ ಆಗಿದ್ದ ಹೇಲಿ, ಪ್ರಸಕ್ತ ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯಾಗಿದ್ದಾರೆ.
ಬೌದ್ಧಿಕ ಆಸ್ತಿ ಕ್ಷೇತ್ರದಲ್ಲಿ ‘ಸಾಕಷ್ಟು ಸುಧಾರಣೆ’ ತೋರದ ಭಾರತವನ್ನು ಅಮೆರಿಕ ಎಪ್ರಿಲ್‌ನಲ್ಲಿ ತನ್ನ ಆದ್ಯತಾ ನಿಗಾ ಪಟ್ಟಿಯಲ್ಲಿರಿಸಿರುವುದನ್ನು ಸ್ಮರಿಸಬಹುದಾಗಿದೆ.







