‘ಮಕ್ಕಳ ಹಕ್ಕುಗಳ ರಕ್ಷಣೆ’ ಕರ್ನಾಟಕ ಮಾದರಿ: ಡಾ.ಯಾಸ್ಮಿನ್ ಅಲಿಹಕ್

ಬೆಂಗಳೂರು, ಆ.4: ಮಕ್ಕಳ ಹಕ್ಕುಗಳ ರಕ್ಷಣೆ, ಅವರ ಧ್ವನಿಗೆ ಜನಪ್ರತಿನಿಧಿಗಳು ಪೂರಕವಾಗಿ ಸ್ಪಂದಿಸುವುದರಲ್ಲಿ ಕರ್ನಾಟಕವು ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಯುನಿಸೆಫ್‌ನ ಭಾರತೀಯ ಪ್ರತಿನಿಧಿ ಡಾ.ಯಾಸ್ಮಿನ್ ಅಲಿಹಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ವಿಧಾನಪರಿಷತ್ತು ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಯ ಶಾಸಕರ ವೇದಿಕೆ ಜೊತೆ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್ತಿನ ಕಾರ್ಯಕಲಾಪದಲ್ಲಿ ಮಕ್ಕಳ ಸಮಸ್ಯೆಗಳು, ಹಕ್ಕುಗಳ ರಕ್ಷಣೆಗೆ ಕಾಲಾವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದರು.
ಗ್ರಾಮ ಪಂಚಾಯಿತಿ ಮಟ್ಟದಿಂದ ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಪ್ರಯತ್ನಗಳು ನಡೆಸಬೇಕು. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಾದರೆ ಅವರಿಗೆ ಅಪೌಷ್ಠಿಕತೆಯ ಸಮಸ್ಯೆ ಕಾಡದಂತೆ ಜನಪ್ರತಿನಿಧಿಗಳು ಎಚ್ಚರಿಕೆ ವಹಿಸಬೇಕು. ಮಕ್ಕಳ ವಿಚಾರದಲ್ಲಿ ಯುನಿಸೆಫ್ ಎಲ್ಲ ಹಂತಗಳಲ್ಲೂ ಶಾಸಕಾಂಗದ ನೆರವನ್ನು ಬಯಸುತ್ತದೆ ಎಂದು ಅವರು ಹೇಳಿದರು.
ಮಕ್ಕಳ ಧ್ವನಿಗೆ ಜನಪ್ರತಿನಿಧಿಗಳು ಗೌರವ ನೀಡಬೇಕು. ವಿಧಾನಮಂಡಲದಲ್ಲಿ ಮಕ್ಕಳ ವಿಚಾರ ಚರ್ಚೆ ನಡೆಸುವುದು, ಮಕ್ಕಳ ಸಂಸತ್ತು ನಡೆಸಿ ಸರಕಾರದ ಮುಖ್ಯಸ್ಥರಿಂದ ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳುವಂತಹ ಬೆಳವಣಿಗೆಗಳು ಪ್ರಶಂಸಾರ್ಹ ಎಂದು ಯಾಸ್ಮಿನ್ ಅಲಿಹಕ್ ತಿಳಿಸಿದರು.
ವಿಧಾನಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ವಿಧಾನಪರಿಷತ್ತಿನ ಕಾರ್ಯಕಲಾಪದಲ್ಲಿ ಒಮ್ಮೆ ಮಕ್ಕಳ ಹಕ್ಕುಗಳ ರಕ್ಷಣೆ, ಸಮಸ್ಯೆಗಳು, ಅವುಗಳಿಗೆ ಪರಿಹಾರ ಕಲ್ಪಿಸಲು ಅರ್ಧದಿನದ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈ ಚರ್ಚೆಯು ಮೂರುವರೆ ದಿನಗಳ ಕಾಲ ನಡೆಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಈ ಚರ್ಚೆಗೆ ಸಂಬಂಧಿಸಿದಂತೆ ನಾಲ್ಕೂವರೆ ಗಂಟೆ ಉತ್ತರ ನೀಡಿದರು ಎಂದು ಸಭೆಯ ಗಮನಕ್ಕೆ ತಂದರು.
ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯಸಚೇತಕ ಕ್ಯಾಪ್ಟನ್ ಗಣೇಶ್‌ಕಾರ್ಣಿಕ್ ಮಾತನಾಡಿ, ಮಕ್ಕಳ ಹಕ್ಕುಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಯುನಿಸೆಫ್ ಸೇರಿದಂತೆ ಸರಕಾರಗಳ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯವಿದೆ ಎಂದರು.
ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಗೃಹ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ ಇಲಾಖೆ ಸೇರಿದಂತೆ ಮಕ್ಕಳಿಗೆ ಸಂಬಂಧಿಸಿದ ಪ್ರಮುಖ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಸಿ, ಒಂದು ಅಥವಾ ಒಂದೂವರೆ ಗಂಟೆಗಳ ಕಾಲ ಕಾರ್ಯಾಗಾರ ನಡೆಸುವುದು ಉತ್ತಮ ಎಂದು ಅವರು ಸಲಹೆ ನೀಡಿದರು.
ರಾಜ್ಯ ಸರಕಾರದ ಮುಖ್ಯಸಚೇತಕ ಐವಾನ್ ಡಿಸೋಜಾ ಮಾತನಾಡಿ, ವಿಧಾನಪರಿಷತ್ತಿನಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ನಡೆದ ಚರ್ಚೆಯ ಮಾದರಿಯಲ್ಲೆ ವಿಧಾನಸಭೆಯಲ್ಲೂ ಚರ್ಚೆ ನಡೆಸುವ ಸಂಬಂಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮಕ್ಕಳಲ್ಲಿ ಕಾಡುತ್ತಿರುವ ಅಪೌಷ್ಠಿಕತೆಯನ್ನು ದೂರ ಮಾಡುವಲ್ಲಿ ಸರಕಾರ ಜಾರಿಗೆ ತಂದಿರುವ ಕ್ಷೀರಭಾಗ್ಯ, ಮಾತೃಪೂರ್ಣ ಯೋಜನೆಗಳು ಸಹಕಾರಿಯಾಗಿವೆ. ಅಲ್ಲದೆ, ಕಳೆದ ನಾಲ್ಕು ವರ್ಷಗಳಲ್ಲಿ 0-6 ವರ್ಷಗಳ ಮಕ್ಕಳ ಕಲ್ಯಾಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಲಭ್ಯವಾಗುತ್ತಿದೆ ಎಂದು ಸೆಂಟರ್ ಫಾರ್ ಬಜೆಟ್ ಅಂಡ್ ಪಾಲಿಸಿ ಸ್ಟಡೀಸ್‌ನ ಜ್ಯೋತ್ಸ್ನಾ ಝಾ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ 2001-02 ರಿಂದ 2017-18ರ ವರೆಗೆ ಕರ್ನಾಟಕದಲ್ಲಿ ಮಕ್ಕಳಿಗಾಗಿ ಖರ್ಚು ಮಾಡಿರುವ ಅನುದಾನಕ್ಕೆ ಸಂಬಂಧಿಸಿದ ವರದಿಯನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಯುನಿಸೆಫ್‌ನ ಹೈದರಾಬಾದ್ ಕಚೇರಿಯ ಮುಖ್ಯಸ್ಥೆ ಮಿಟ್ಚೆಲ್ ರಸ್ಡಿಯಾ, ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ, ಸೆಂಟರ್ ಫಾರ್ ಬಜೆಟ್ ಅಂಡ್ ಪಾಲಿಸಿ ಸ್ಟಡೀಸ್‌ನ ಜ್ಯೋತ್ಸ್ನಾ ಝಾ, ಮಧುಸೂದನ್ ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು







