ಚೀನಾವು ಅರುಣಾಚಲ ಬೇಕೆನ್ನುವುದರಲ್ಲಿ ಅರ್ಥವಿಲ್ಲ: ಚೀನಾ ವಿಶ್ಲೇಷಕ

ಬೀಜಿಂಗ್, ಆ. 4: ಅರುಣಾಚಲಪ್ರದೇಶದ ಬಗ್ಗೆ ಚೀನಾ ತೋರಿಸುತ್ತಿರುವ ಮೋಹವನ್ನು ಪ್ರಶ್ನಿಸುವ ಮೂಲಕ ಆ ದೇಶದ ರಕ್ಷಣಾ ವಿಶ್ಲೇಷಕರೊಬ್ಬರು ಅಚ್ಚರಿ ಹುಟ್ಟಿಸಿದ್ದಾರೆ.
ಈ ರಾಜ್ಯ ‘ಕೋಳಿಯ ಪಕ್ಕೆಲುಬು’ ಮಾತ್ರ, ದೇಶಕ್ಕೆ ಅದೊಂದು ‘ಆಸ್ತಿ’ಯಾಗಲಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅರುಣಾಚಲಪ್ರದೇಶವು ‘ದಕ್ಷಿಣ ಟಿಬೆಟ್’ ಎಂಬುದಾಗಿ ಚೀನಾ ಹೇಳಿಕೊಳ್ಳುತ್ತಿದೆ. ಎಪ್ರಿಲ್‌ನಲ್ಲಿ ಅಲ್ಲಿಗೆ ದಲಾಯಿ ಲಾಮಾ ಭೇಟಿ ನೀಡಿರುವುದಕ್ಕೆ ಪ್ರತಿಯಾಗಿ, ಚೀನಾವು ರಾಜ್ಯದ ಆರು ನಗರಗಳ ಚೀನೀ ಹೆಸರುಗಳನ್ನು ಬಿಡುಗಡೆ ಮಾಡಿತ್ತು.
ರಾಜ್ಯದ ಮೇಲಿನ ಚೀನಾದ ಹಕ್ಕನ್ನು ಮತ್ತೆ ಪ್ರತಿಪಾದಿಸುವುದು ನಗರಗಳ ಮರುನಾಮಕರಣದ ಉದ್ದೇಶವಾಗಿದೆ ಎಂದು ಚೀನಾ ಸರಕಾರಿ ಮಾಧ್ಯಮಗಳು ವರದಿ ಮಾಡಿದ್ದವು.
‘‘ಈ ವಿವಾದಾಸ್ಪದ ಭೂಭಾಗವು ಹಲವು ವರ್ಷಗಳಿಂದ ಚೀನಾ ಮತ್ತು ಭಾರತಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆಯಾದರೂ, ಅದೊಂದು ಚೀನಾಕ್ಕೆ ಆಸ್ತಿಯಾಗಲಾರದು’’ ಎಂದು ಚೀನಾ ವಿಶ್ಲೇಷಕ ವಾಂಗ್ ತಾವೊ ತಾವೊ ಹೇಳಿದರು.
‘‘ವಾಸ್ತವವಾಗಿ, ಅದು ಚೀನಾದ ಪಾಲಿಗೆ ಕೋಳಿಯ ಪಕ್ಕೆಲುಬು ಅಷ್ಟೆ’’ ಎಂದು ಅವರು ಚೀನಾದ ಪ್ರಸಿದ್ಧ ವೆಬ್‌ಸೈಟ್ zhihu.com ನಲ್ಲಿ ಬರೆದ ಲೇಖನವೊಂದರಲ್ಲಿ ವಾಂಗ್ ಹೇಳಿದ್ದಾರೆ.
‘‘ಈ ರಾಜ್ಯಕ್ಕಾಗಿ ಚೀನಾ ಮತ್ತು ಭಾರತ ನಡುವೆ ನೆಲೆಸಿರುವ ವಿವಾದ ಅರ್ಥಹೀನವಾಗಿದೆ. ಯಾಕೆಂದರೆ, ಈ ವಿವಾದಾಸ್ಪದ ರಾಜ್ಯವನ್ನು ಅಭಿವೃದ್ಧಿಪಡಿಸುವುದು ಕಷ್ಟ ಮಾತ್ರವಲ್ಲ, ಆರ್ಥಿಕ, ರಾಜಕೀಯ ಮತ್ತು ನಿರ್ವಹಣಾ ವೆಚ್ಚಗಳು ತುಂಬಾ ಅಧಿಕವಾಗಿರುತ್ತವೆ’’ ಎಂದು ವಾಂಗ್ ನುಡಿದರು.







