ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಉಚಿತಸೀರೆ ವಿತರಣೆ

ಚಾಮರಾಜನಗರ, ಆ.04: ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಿರ್ಗತಿಕ ಮಹಿಳೆಯರಿಗೆ ಉಚಿತವಾಗಿ ಸೀರೆ ವಿತರಿಸುತ್ತಿರುವುದು ಮೆಚ್ಚುಗೆ ವಿಷಯ ಎಂದು ಬಿಎಸ್‌ವಿ ಪ್ರತಿಷ್ಠಾನದ ಅಧ್ಯಕ್ಷ ವೆಂಕಟನಾಗಪ್ಪ ಶೆಟ್ಟಿ ಬಾಬು ಅಭಿಪ್ರಾಯಪಟ್ಟರು.
ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬೆಳಿಗ್ಗೆ 10 ಗಂಟೆಗೆ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ವತಿಯಿಂದ ಅರ್ಚಕ ರಾಮಕೃಷ್ಣ ಭಾರಧ್ವಜ್ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಸಿ, ನಂತರ ಮುತ್ತೈದೆಯರಿಗೆ ಅರಿಶಿನ, ಕುಂಕುಮ, ಬಳೆ, ಹೂವು, ಬ್ಲೌಸ್‌ಪೀಸ್ ನೀಡಲಾಯಿತು.
ಬಳಿಕ ನಿರ್ಗತಿಕ ವೃದ್ದೆಯರಿಗೆ ಸೀರೆ ನೀಡಿ ಮಾತನಾಡಿದ ಇವರು, ಈಗಿನ ಕಾಲದಲ್ಲಿ ಭಿಕ್ಷಾಟನೆ ಮಾಡುವವರಿಗೆ ಒಂದು ರೂಪಾಯಿ ಕೊಡುವುದು ಕಷ್ಟ. ಅಂತಹದರಲ್ಲಿ ಈ ವೇದಿಕೆಯು ವಿಭಿನ್ನವಾಗಿ ಸೀರೆ ವಿತರಣೆ ಮಾಡುತ್ತಿದ್ದಾರೆ. ಇವರಿಗೆ ದೇವರು ಸಕಲ ಸಂಪತ್ತು ನೀಡಲೆಂದು ಹಾರೈಸಿದರು.
ವೇದಿಕೆಯ ಅಧ್ಯಕ್ಷ ಜಿ.ಬಂಗಾರು ಮಾತನಾಡಿ, ಕಳೆದ 15 ವರ್ಷಗಳಿಂದ ವೇದಿಕೆ ವತಿಯಿಂದ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೇವಸ್ಥಾನದ ಮುಂಭಾಗ ವರಮಹಾಲಕ್ಷ್ಮಿ ಸಂಜೆ ಎಂಬ ವಿನೂತನ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದೆವು. ಈ ಬಾರಿ ಸರಳವಾಗಿ ಮುತ್ತೈದೆಯರಿಗೆ ಬಾಗಿನ ಹಾಗೂ ದೇವಸ್ಥಾನದ ಮುಂದೆ ಭಿಕ್ಷಾಟನೆ ಮಾಡುವ ವೃದ್ದೆ ಮಹಿಳೆಯರಿಗೆ ಸೀರೆ ವಿತರಣೆ ಮಾಡುವ ಮೂಲಕ ಅಚರಿಸಿದೆವು ಎಂದು ತಿಳಿಸಿದರು.
ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್.ಎನ್.ಋಗ್ವೇದಿ ಮಾತನಾಡಿ, ಭಾರತೀಯ ಸಂಸ್ಕೃತಿ ಬಿಂಬಿಸುವಂತಹ ಕಾರ್ಯಕ್ರಮಗಳನ್ನು ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಆಚರಿಸುತ್ತಿರುವುದು ಮೆಚ್ಚುಗೆ ವಿಷಯ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಡಿ.ನಾಗವೇಣಿ, ನಗರಸಭಾ ಮಾಜಿ ಸದಸ್ಯೆ ಪುಷ್ಪಾ ನಾಗರತ್ನ ಮಾತನಾಡಿದರು. ಸಮಾಜ ಸೇವಕ ಅಂಬರೀಶ್, ಕ್ರೀಡಾ ಇಲಾಖೆಯ ಯುವ ಸ್ಪಂಧನದ ಸಂಯೋಜಕಿ ಮಾದಲಾಂಬಿಕ, ನೆಹರು ಯುವ ಕೇಂದ್ರದ ದ್ರಾಕ್ಷಾಯಿಣಿ, ರೂಪಾ. ಶೃತಿ ರಾಮಕೃಷ್ಣ ಭಾರಧ್ವಜ್, ಮಾನಸ, ನಂದಿನಿ, ಅನು, ಮಂಜು, ಸಂಗೀತ, ಮಹೇಶ್, ಮಂಜು ಇನ್ನಿತರರು ಹಾಜರಿದ್ದರು. ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.







