ಆ.7ರಿಂದ ಡಿ.ಸಿ ಮನ್ನಾ ಭೂಮಿ ಒತ್ತುವರಿ ತೆರವಿಗೆ ಆಗ್ರಹಿಸಿ ಧರಣಿ
ಪುತ್ತೂರು, ಆ.4: ಡಿ.ಸಿ ಮನ್ನಾ ಭೂಮಿಯನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಕಾಯ್ದಿರಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ನೇತೃತ್ವದಲ್ಲಿ ಆ.7ರಿಂದ ಬೇಡಿಕೆ ಈಡೇರುವ ತನಕ ಪುತ್ತೂರು ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಆಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು, ಅರೆ ಬೆತ್ತಲೆ ಪ್ರತಿಭಟನೆಗೂ ನಾವು ಸಿದ್ಧರಾಗಿದ್ದೇವೆ ಎಂದು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕಾ ತಿಳಿಸಿದ್ದಾರೆ.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಾಲೂನಲ್ಲಿ 118 ಎಕರೆ ಡಿ.ಸಿ ಮನ್ನಾ ಭೂಮಿ ಎಂದು ದಾಖಲಾಗಿದೆ. ಇದರಲ್ಲಿ ಕೊಡಿಪ್ಪಾಡಿ ಎಂಬಲ್ಲಿರುವ 5.90 ಎಕರೆ ಸ್ಥಳ ಅರಣ್ಯ ಇಲಾಖೆಯ ವಶದಲ್ಲಿದೆ. ಇದನ್ನು ಹೊರತು ಪಡಿಸಿದರೆ ಉಳಿದ ಎಲ್ಲಾ ಡಿ.ಸಿ ಮನ್ನಾ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಬಡ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನತೆಗೆ ಸೇರಬೇಕಾದ ಈ ಭೂಮಿ ಶ್ರೀಮಂತರ ಪಾಲಾಗಿದೆ. ಜಿಲ್ಲೆಯ ಕಂದಾಯ ಇಲಾಖೆ ಈ ಭೂಮಿಯನ್ನು ವಾಪಾಸು ಪಡೆದುಕೊಂಡು ದಲಿತ ವರ್ಗದ ಮಂದಿಗೆ ನೀಡುವವರೆಗೂ ನಮ್ಮ ಹೋರಾಟ ನಡೆಯಲಿದೆ. ಈ ಹಿಂದೆ ಜಿಲ್ಲೆಯಲ್ಲಿ ಸೆಕ್ಷನ್ ಜಾರಿಯಲ್ಲಿದೆ ಎಂಬ ಕಾರಣಕ್ಕಾಗಿ ನಮ್ಮ ಪ್ರತಿಭಟನೆಯನ್ನು ಮುಂದೂಡಿದ್ದೆವು. ಇನ್ನು ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲುವುದಿಲ್ಲ. ಅರೆಬೆತ್ತಲೆ ಪ್ರತಿಭಟನೆಗೂ ನಾವು ಸಿದ್ಧವಾಗಿದ್ದೇವೆ ಎಂದರು.
ಪುತ್ತೂರು ಉಪವಿಭಾಗಾಧಿಕಾರಿಗಳು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಎಲ್ಲಾ ಡೀಸಿ ಮನ್ನಾ ಭೂಮಿಯನ್ನು ಕಂದಾಯ ಇಲಾಖೆ ದಲಿತವರ್ಗಕ್ಕೆ ನೀಡುವ ಕೆಲಸವನ್ನು ತಕ್ಷಣ ಮಾಡಬೇಕು. ಈ ಭೂಮಿಯಲ್ಲಿ ಯಾವುದೇ ವರ್ಗದ ಬಡ ಜನತೆ ಮನೆ ನಿರ್ಮಿಸಿಕೊಂಡಿದ್ದರೂ ಅವರನ್ನು ಎಬ್ಬಿಸದೆ ಅವರಿಗೂ 5 ಸೆಂಟ್ಸ್ ಭೂಮಿ ನೀಡಬೇಕು. ಚಿಕ್ಕಮುಡ್ನೂರು ಗ್ರಾಮದಲ್ಲಿರುವ 2.54 ಎಕ್ರೆ ಡಿಸಿ ಮನ್ನಾ ಜಮೀನನ್ನು ಪರಿಶಿಷ್ಟ ಜಾತಿ -ಪಂಗಡದ ಜನರ ನಿವೇಶನಕ್ಕಾಗಿ ಮೀಸಲಿಡಬೇಕು ಎಂದು ಹೇಳಿದರು.
ಪುತ್ತೂರು ನಗರಸಭಾ ವ್ಯಾಪ್ತಿಯ ಮೂವಪ್ಪು ಎಂಬಲ್ಲಿಂದ ಗುರುಂಪುನಾರ್‌ವರೆಗೆ ರಸ್ತೆ ನಿರ್ಮಿಸಬೇಕು. ಪಡ್ನೂರು ಗ್ರಾಮದ ಪಡ್ಡಾಯೂರು ಪಳ್ಳ ಎಂಬಲ್ಲಿರುವ 13.44 ಎಕರೆ ಸರ್ಕಾರಿ ಜಮೀನನ್ನು ದಲಿತ ವರ್ಗ ಹಾಗೂ ವಿಕಲಚೇತನರಿಗೆ ಮೀಸಲಿಡುವುದು, ನೆಲ್ಯಾಡಿ ಗ್ರಾಮದ ಪಡುಬೆಟ್ಟು ನಿವಾಸಿ ಸುಮಿತ್ರಾ ಎಂಬವರಿಗೆ ಬಸವ ವಸತಿ ಮನೆಗೆ ಮಂಜೂರಾದ ಹಣ ಬಿಡುಗಡೆ ಮಾಡಬೇಕು. ಬಲ್ನಾಡು ಗ್ರಾಮದ ಉಜ್ರುಪಾದೆಯಲ್ಲಿರುವ 3.45 ಎಕರೆ ಸರ್ಕಾರಿ ಸ್ಥಳವನ್ನು ಪರಿಶಿಷ್ಡ ಜಾತಿ ಮತ್ತು ಪಂಗಡಕ್ಕೆ ಮೀಸಲಿಡಬೇಕು. ಪಾಲ್ತಾಡಿ ಗ್ರಾಮದ ಎ.ಪಿ.ನವೀತಾ ಎಂಬವರಿಗೆ ಹಕ್ಕುಪತ್ರ ನೀಡಬೇಕು. ಕೆಮ್ಮಿಂಜೆ ಗ್ರಾಮದ ಕೊಂಬೆರೋಟು ಎಂಬಲ್ಲಿರುವ ಸರ್ಕಾರಿ ಜಮೀನಿನಲ್ಲಿ ಶಕುಂತಳಾ ಎಂಬವರು ನಿರ್ಮಿಸಿರುವ ಐಷಾರಾಮಿ ಮನೆ ಕಟ್ಟಡವನ್ನು ತೆರವುಗೊಳಿಸಬೇಕು. ಪುತ್ತೂರಿನ ಬ್ರಹ್ಮನಗರ ದಲಿತ ಕಾಲೋನಿ ರಸ್ತೆಯನ್ನು ಆಕ್ರಮಿಸಿಕೊಂಡು ನಿರ್ಮಿಸಲಾಗಿರುವ ಕಟ್ಟಡವನ್ನು ತೆರವುಗೊಳಿಸಬೇಕು. ಬ್ರಹ್ಮನಗರದ ದಲಿತ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು. ಬಪ್ಪಳಿಗೆ ಎಂಬಲ್ಲಿರುವ ಅಂಗವಿಕಲೆಯಾಘಿರುವ ವೃದ್ಧೆ ಪ್ರಣವಿ ಎಂಬವರ ಮನೆಗೆ ರಸ್ತೆ ನಿರ್ಮಿಸಿಕೊಡಬೇಕು ಎಂದರು.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಕುಂದುಕೊರತೆಗಳ ಸಭೆಯಲ್ಲಿ ಡಿಸಿ ಮನ್ನಾ ಭೂಮಿ ಬಗ್ಗೆ ಪ್ರಶ್ನಿಸಿದರೆ ಜಿಲ್ಲಾಧಿಕಾರಿಗಳು ‘ಗೊತ್ತಿಲ್ಲ’ ಎಂದು ಉತ್ತರಿಸುತ್ತಿದ್ದಾರೆ. ಡಿಸಿ ಮನ್ನಾ ಭೂಮಿ ಬಗ್ಗೆ ಗೊತ್ತಿಲ್ಲದ ಜಿಲ್ಲಾಧಿಕಾರಿಯವರಿಗೆ ಆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹತೆ ಇದೆಯಾ ಎಂದು ಗಿರಿಧರ್ ನಾಯ್ಕಿ ಅವರು ಪ್ರಶ್ನಿಸಿದರು. ತಹಶೀಲ್ದಾರ್, ಉಪವಿಭಾಗಾಧಿಕಾರಿ ಸೇರಿದಂತೆ ಕಂದಾಯ ಇಲಾಖೆಯು ಡಿಸಿ ಮನ್ನಾ ಭೂಮಿಯಲ್ಲಿ ವಿಚಾರದಲ್ಲಿ ನಾಟಕ ಮಾಡುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಚಂದ್ರ.ಐ.ಇದ್ಪಾಡಿ, ಸದಸ್ಯರಾದ ಅನಿಲ್ ಕುಮಾರ್ ,ಸತೀಶ್ ಕೆ, ಹಾಗೂ ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಪುತ್ತೂರು ತಾಲೂಕು ಘಟಕದ ಮಹಿಳಾ ವಿಭಾಗದ ಅಧ್ಯಕ್ಷೆ ಆಶಾಲತ ಎನ್.ಸೊರಕೆ ಉಪಸ್ಥಿತರಿದ್ದರು.







