ಮಕ್ಕಳು ಕನಸುಗಳನ್ನು ಅನುಸರಿಸಲು ಪೋಷಕರು ಮಾರ್ಗದರ್ಶಕರಾಗಿ: ಹಬೀಬಾ ಎನ್.ಪಾಷ

ಚಿಕ್ಕಮಗಳೂರು, ಆ.4: ಮಕ್ಕಳಿಗೆ ಪ್ರೀತಿ ಕೊಡಿ, ಆದರೆ ನಿಮ್ಮ ಆಲೋಚನೆಗಳನ್ನು ಹೇರಬೇಡಿ. ಅವರ ಕನಸುಗಳನ್ನು ಅನುಸರಿಸಲು ಮಾರ್ಗದರ್ಶಕರಾಗಿ ಎಂದು ಮೌಂಟೆನ್ ವ್ಯೆ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಬೀಬಾ ಎನ್.ಪಾಷ ತಿಳಿಸಿದರು.
ಅವರು ಶುಕ್ರವಾರ ವಿದ್ಯಾನಗರದ ಮೌಂಟೆನ್ ವ್ಯೆ ಪಿಯು ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಪೋಷಕರ ಸಮಾವೇಶದಲ್ಲಿ ಮಾತನಾಡಿದರು. ಪಿಯು ಶಿಕ್ಷಣ ಬದುಕಿನ ಪ್ರಮುಖ ತಿರುವು. ಸರಿಯಾದ ಆಯ್ಕೆಯೊಂದಿಗೆ ಮುಂದಡಿಯಿಟ್ಟರೆ ಸಾಧನೆ ಮಾಡಬಹುದು. ಮಕ್ಕಳಿಗೆ ನಿಮ್ಮ ಪ್ರೀತಿಕೊಡಿ ಆದರೆ ನಿಮ್ಮ ಆಲೋಚನೆಗೆ ಅನುಗುಣವಾಗಿಯೆ ಶಿಕ್ಷಣ ಮುಂದುರೆಸಬೇಕೆಂಬ ಒತ್ತಾಯ ಹೇರಬೇಡಿ. ಅವರಿಗೂ ಅವರದೇ ಕನಸುಗಳಿರುತ್ತವೆ ಎಂದು ಹೇಳಿದರು.
ನಿಮ್ಮ ಆಲೋಚನೆಗಳು ಎಷ್ಟೇ ಉನ್ನತವಾಗಿದ್ದರೂ ಮಕ್ಕಳ ಮನಸ್ಸಿನಲ್ಲಿ ವಿಭಿನ್ನ ಆಲೋಚನೆಗಳು ಮೂಡಿರುತ್ತವೆ. ಕಾಲಮಾನಕ್ಕೆ ಅನುಗುಣವಾಗಿ ಬದಲಾವಣೆಗೆ ಸಿದ್ಧವಾಗಬೇಕು. ಅವರ ಸ್ವತಂತ್ರ ಆಲೋಚನೆಗೆ ಪೋಷಕರು ನೀರೆರೆಯಬೇಕು. ಮಕ್ಕಳು ತಪ್ಪಿ ನಡೆದಾಗ ಸರಿದಾರಿ ತೋರಬೇಕು. ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದಿಂದ ಹಣಮಾಡಬಹುದೆಂಬ ನಂಬಿಕೆ ಸರ್ವೇ ಸಾಮಾನ್ಯವಾಗಿದೆ. ಬದುಕಿಗೆ ಹಣ ಒಂದೇ ಮುಖ್ಯವಲ್ಲ. ಹಣವೂ ಬೇಕು, ಆದರೆ ಚಾರಿತ್ರ್ಯವಂತ-ಹೃದಯವಂತ ನಾಗರಿಕರಾಗಿ ರೂಪುಗೊಳ್ಳುವುದು ಬಹಳಮುಖ್ಯ. ವಿದ್ಯಾರ್ಥಿ ದಿಸೆಯಲ್ಲಿ ಓದುವುದು-ಅಂಕಗಳಿಸುವುದು ಅತ್ಯಗತ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ತಸ್ನಿಮ್ ಫಾತೀಮಾ ಮಾತನಾಡಿ, ಕಲಿಕೆಯಲ್ಲಿ ವಿಶ್ವಾಸ, ಶ್ರದ್ಧೆ, ಆಸಕ್ತಿ, ಕುತೂಹಲ ಮುಖ್ತ. ಯಶಸ್ಸಿಗೆ ಕಠಿಣಪರಿಶ್ರಮದ ಹೊರತು ಬೇರ್ಯಾವುದೇ ಅಡ್ಡದಾರಿಗಳಿಲ್ಲ. ಅಂದಿನ ಪಾಠ-ಪ್ರವಚನಗಳನ್ನು ಅಂದೇ ಓದಿ, ಬರೆದು, ಕಲಿಯುವುದರಿಂದ ಪರೀಕ್ಷೆಯ ಭಯವಿರುವುದಿಲ್ಲ. ಸೂಕ್ತ ನಿರ್ಧಾರ, ನಿಶ್ಚಲವಾದ ಗುರಿ, ನಯವಾದ ಮಾತುಗಾರಿಕೆ, ವಿನಯವಂತಿಕೆ ವಿದ್ಯಾರ್ಥಿಗಳು ರೂಢಿಸಿಕೊಂಡರೆ ಯಶಸ್ಸು ಗಳಿಸಬಹುದೆಂದರು.
ಕಳೆದ ಸಾಲಿನಲ್ಲಿ ವಿವಿಧ ವಿಭಾಗಗಳಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪ್ರತಿಭಾವಂತರ ಪರವಾಗಿ ಮಾತನಾಡಿದ ಶಿಫಾ, ನಮ್ರಾ ಮತ್ತು ಸಲ್ಮಾನ್ ಅತ್ಯುತ್ತಮ ಉಪನ್ಯಾಸಕರ ಮಾರ್ಗದರ್ಶನ ಹಾಗೂ ಪೋಷಕರ ಪ್ರೋತ್ಸಾಹ ಹೆಚ್ಚು ಅಂಕಗಳಿಸಲು ಸಾಧ್ಯವಾಯಿತು. ಪಾಠದ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ತರಬೇತಿಯೂ ಉತ್ತಮವಾಗಿದ್ದು, ಅಂತರಕಾಲೇಜು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಹುರಿದುಂಬಿಸಿದ್ದರಿಂದ ಆತ್ಮವಿಶ್ವಾಸ ಹೆಚ್ಚಿದೆ ಎಂದು ನುಡಿದರು.
ಕಾಲೇಜಿನ ಆಡಳಿತಾಧಿಕಾರಿ ಭದ್ರೇಗೌಡ, ಉಪಪ್ರಾಂಶುಪಾಲೆ ಜೆಲ್ಲಿ ಕೆ.ಜಾರ್ಜ್, ಲೆಕ್ಕಾಧಿಕಾರಿ ರತೀಶ್, ಪಿಯು ಪ್ರಾಂಶುಪಾಲ ಇಮ್ತಿಯಾಜ್‌ಅಲಿಬೇಗ್, ಹೇಮಲತಾ ನಾಗರಾಜ್, ದೈಹಿಕಶಿಕ್ಷಣ ನಿರ್ದೇಶಕ ಮುದಬಿರ್‌ಪಾಷ, ಹಿರಿಯ ಉಪನ್ಯಾಸಕರುಗಳಾದ ವಿವೇಕಪ್ರಭು, ಸುಜಾತ, ಧನಂಜಯ, ರಘು ಮತ್ತಿತರರು ಪಾಲ್ಗೊಂಡಿದ್ದರು.







