ರಿಪಬ್ಲಿಕ್ ಟಿವಿ, ಅರ್ನಬ್ ಗೋಸ್ವಾಮಿಗೆ ಹೈಕೋರ್ಟ್ ನೋಟೀಸ್
ಸುನಂದಾ ಪುಷ್ಕರ್ ಸಾವು ಪ್ರಕರಣಕ್ಕೆ ಸಂಬಂಧಿಸಿ ತಪ್ಪು ವರದಿ

ಹೊಸದಿಲ್ಲಿ, ಆ. 4: ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ತಪ್ಪು ವರದಿ ಮಾಡುತ್ತಿರುವ ಪತ್ರಕರ್ತ ಹಾಗೂ ಚಾನೆಲ್ ಅನ್ನು ನಿಯಂತ್ರಿಸಲು ಕೋರಿ ಕಾಂಗ್ರೆಸ್ ನಾಯಕ ಶಶಿ ತರೂರ್ ಸಲ್ಲಿಸಿದ ಅರ್ಜಿ ಹಿನ್ನೆಲೆಯಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯ ಶುಕ್ರವಾರ ರಿಪಬ್ಲಿಕ್ ಟಿವಿ ಹಾಗೂ ಅರ್ನಬ್ ಗೋಸ್ವಾಮಿಗೆ ನೊಟೀಸು ಜಾರಿ ಮಾಡಿದೆ.
ರಿಪಬ್ಲಿಕ್ ಸುದ್ದಿ ವಾಹಿನಿ ಹಾಗೂ ಅರ್ನಬ್ ಗೋಸ್ವಾಮಿ ಪರ ವಕೀಲ ಮೇ 29ರಂದು ನ್ಯಾಯಾಲಯದಲ್ಲಿ ಭರವಸೆ ನೀಡಿದ ಹೊರತಾಗಿಯೂ ತನ್ನ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತರೂರು ಗುರುವಾರ ಆರೋಪಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಅದು (ರಿಪಬ್ಲಿಕ್ ಟಿವಿ) ತನಿಖೆ ನಡೆಸಲು ಬಯಸಿದರೆ, ನಾವು ನಿಲ್ಲಿಸಲು ಸಾಧ್ಯವಿಲ್ಲ. ಆದರೆ, ಅದು ನಿಮ್ಮ ಹೆಸರನ್ನು ಉಲ್ಲೇಖಿಸಬಾರದು ಎಂದು ಹೇಳಿರುವ ಉಚ್ಚ ನ್ಯಾಯಾಲಯ ತರೂರ್ ಅವರ ವೌನಕ್ಕೆ ಗೌರವ ನೀಡಿ ಎಂದಿದೆ.
ತನ್ನ ವಿರುದ್ಧ ರಿಪಬ್ಲಿಕ್ ಟಿವಿ ಪ್ರಸಾರ ಮಾಡುತ್ತಿರುವ ಮಾನಹಾನಿಕರ ವರದಿ ನಿಲ್ಲಿಸುವಂತೆ ಕೋರಿ ಸಲ್ಲಿಸಲಾದ ತರೂರ್ ಮನವಿ ಬಗ್ಗೆ ಉಚ್ಚ ನ್ಯಾಯಾಲಯ ಯಾವುದೇ ಮಧ್ಯಂತರ ಆದೇಶ ಜಾರಿ ಮಾಡಿಲ್ಲ. ಇದಕ್ಕೆ ಯಾವುದೇ ತುರ್ತು ಇಲ್ಲ. ಯಾಕೆಂದರೆ ರಿಪಬ್ಲಿಕ್ ಟಿ.ವಿ. ವಿರುದ್ಧ ದಾಖಲಿಸಲಾದ ಮಾನನಷ್ಟ ಮೊಕದ್ದಮೆ ಆಗಸ್ಟ್ 16ರಂದು ವಿಚಾರಣೆಗೆ ಬರಲಿದೆ ಎಂದು ಉಚ್ಚ ನ್ಯಾಯಾಲಯ ಹೇಳಿದೆ.
ತರೂರ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ನ್ಯಾಯವಾದಿ ಸಲ್ಮಾನ್ ಖುರ್ಷಿದ್, ನ್ಯಾಯಾಲಯದ ಕಲಾಪವನ್ನು ರಿಪಬ್ಲಿಕ್ ಟಿವಿ ತಮಾಷೆ ಮಾಡುತ್ತಿದೆ. ಪುಷ್ಕರ್ ಸಾವು ಪ್ರಕರಣವನ್ನು ಕೊಲೆ ಎಂದು ಹೇಳುವ ಮೂಲಕ ಟಿವಿ ವಾಹಿನಿ ಪೂರ್ವಗ್ರಹ ಪೀಡಿತವಾಗಿ ಎಂದು ಖುರ್ಷಿದ್ ಪ್ರತಿಪಾದಿಸಿದ್ದಾರೆ.







