ಮೂರನೆ ದಿನವೂ ಶಿವಕುಮಾರ್ ನಿವಾಸದಲ್ಲಿ ಐಟಿ ಅಧಿಕಾರಿಗಳ ಪರಿಶೀಲನೆ
ಆಪ್ತನ ನಿವಾಸದಲ್ಲಿ 8.6 ಕೋಟಿ ನೋಟಿನ ಕಂತೆಗಳು ಪತ್ತೆ

ಬೆಂಗಳೂರು, ಆ.4: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆ ಹಾಗೂ ಅವರ ಆಪ್ತರ ಮನೆಗಳ ಮೇಲೆ ಮೂರನೆ ದಿನವೂ ಆದಾಯ ತೆರಿಗೆ ಇಲಾಖೆ ದಾಳಿ ಮುಂದುವರಿದಿದೆ. ಈ ಮಧ್ಯೆ ಹೊಸದಿಲ್ಲಿಯಲ್ಲಿನ ಶಿವಕುಮಾರ್ ಅವರ ಆಪ್ತನ ಮನೆಯಲ್ಲಿ 8.6 ಕೋಟಿ ರೂ.ಮೊತ್ತದ ನಗದು ಪತ್ತೆಯಾಗಿದೆ ಎಂದು ಗೊತ್ತಾಗಿದೆ.
ಶರ್ಮಾ ಟ್ರಾವೆಲ್ಸ್‌ನ ಮಾಲಕ ಸುನಿಲ್ ಕುಮಾರ್ ಶರ್ಮಾ ಅವರ ಹೊಸದಿಲ್ಲಿಯ ಸಫ್ದರ್ ಜಂಗ್ ರಸ್ತೆಯಲ್ಲಿರುವ ಮನೆಯಲ್ಲಿ ದೊಡ್ಡ ಪ್ರಮಾಣದ ಹಣ ಪತ್ತೆಯಾಗಿದ್ದು, ಐಟಿ ಅಧಿಕಾರಿಗಳು ಈ ಹಣದ ಮೂಲದ ಬಗ್ಗೆ ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ.
ಇಲ್ಲಿನ ಸದಾಶಿವನಗರದಲ್ಲಿನ ಶಿವಕುಮಾರ್ ನಿವಾಸದ ಮೇಲೆ ಸತತ ಮೂರನೆ ದಿನವೂ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದು, ಶಿವಕುಮಾರ್ ಸೇರಿದಂತೆ ಅವರ ಕುಟುಂಬದ ಸದಸ್ಯರನ್ನು ಗೃಹ ಬಂಧನದಲ್ಲಿರಿಸಿ ಆಸ್ತಿ-ಪಾಸ್ತಿಗಳ ದಾಖಲೆಗಳ ಪತ್ರಗಳ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ್ದಾರೆಂದು ಹೇಳಲಾಗಿದೆ.
ಈ ಮಧ್ಯೆ ನಿರಂತರ ದಾಳಿ, ಅಧಿಕಾರಿಗಳ ಪ್ರಶ್ನೆಗಳಿಂದ ಕೊಂಚ ವಿಚಲಿತರಾದ ಶಿವಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರ ಕುಟುಂಬದ ವೈದ್ಯ ಡಾ.ರಮಣ ರಾವ್ ನೇತೃತ್ವದ ಮೂರು ವೈದ್ಯರ ತಂಡ ಸದಾಶಿವನಗರ ನಿವಾಸಕ್ಕೆ ಆಗಮಿಸಿ, ಅಧಿಕಾರಿಗಳ ಸಮ್ಮುಖದಲ್ಲಿ ತಪಾಸಣೆ ನಡೆಸಿದರು.
ನಾನು ಜವಾಬ್ದಾರನಲ್ಲ: ಬೇರೆಯವರ ಮನೆಯಲ್ಲಿ ಪತ್ತೆಯಾದ ಹಣಕ್ಕೆ ನಾನು ಜವಾಬ್ದಾರನಲ್ಲ. ರಾಜಕೀಯ ಪಕ್ಷದಲ್ಲಿ ರಾಷ್ಟ್ರೀಯ ಮಟ್ಟದ ಮುಖಂಡನಾಗಿದ್ದೇನೆ. ಹೀಗಾಗಿ ನನ್ನ ವ್ಯವಹಾರಗಳನ್ನು ತನ್ನ ಆರ್ಥಿಕ ಸಹಾಯಕರು ನೋಡಿಕೊಳ್ಳುತ್ತಾರೆ. ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ಕಾನೂನು ತಜ್ಞರ ಸಲಹೆ ಪಡೆದು ಉತ್ತರಿಸುವೆ ಎಂದು ಶಿವಕುಮಾರ್, ಅಧಿಕಾರಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಲಾಗಿದೆ.
ಪ್ರವೇಶ ನಿರ್ಬಂಧ: ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು ಎಂಬ ಮಾಧ್ಯಮಗಳ ಸುದ್ದಿ ಹಿನ್ನೆಲೆಯಲ್ಲಿ ಸದಾಶಿವನಗರ ನಿವಾಸಕ್ಕೆ ಧಾವಿಸಿದ ಸಂಸದ ಹಾಗೂ ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಅವರಿಗೆ ಕೇಂದ್ರ ಮೀಸಲು ಪಡೆ ಸಿಬ್ಬಂದಿ ಪ್ರವೇಶ ನೀಡಲಿಲ್ಲ.
ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಸುರೇಶ್ ಆಪ್ತರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದ್ದು, ನಿವಾಸಕ್ಕೆ ತೆರಳುತ್ತಿದಂತೆ ಆದಾಯ ತೆರಿಗೆ ಅಧಿಕಾರಿಗಳು ಒಳ ಹೋಗದಂತೆ ಸೂಚಿಸಿದರು. ವರಮಹಾಲಕ್ಷ್ಮಿ ಹಬ್ಬದ ಆಚರಣೆಗೆ ಬಂದಿದ್ದೇನೆ ಎಂದರೂ, ನಿವಾಸಕ್ಕೆ ತೆರಳಲು ಅಧಿಕಾರಿಗಳ ಒಪ್ಪಿಗೆ ನೀಡಲಿಲ್ಲ. ಹೀಗಾಗಿ ಸುರೇಶ್ ಅವರು ಹಿಂದಿರುಗಿದರು.
ಜೆಡಿಎಸ್ ಬಂಡಾಯ ಶಾಸಕರಾದ ಚಲುವರಾಯಸ್ವಾಮಿ, ಝಮೀರ್ ಅಹ್ಮದ್ ಖಾನ್, ಬಾಲಕೃಷ್ಣ, ಅಖಂಡ ಶ್ರೀನಿವಾಸ ಮೂರ್ತಿ, ರಮೇಶ್ ಬಂಡೀಸಿದ್ದೇಗೌಡ, ಭೀಮಾನಾಯ್ಕಾ ಸೇರಿದಂತೆ ಹಲವು ಮುಖಂಡರು ಶಿವಕುಮಾರ್ ಅವರ ಭೇಟಿಗೆ ನಿವಾಸಕ್ಕೆ ಆಗಮಿಸಿದ್ದರು. ಆದರೆ, ಭದ್ರತಾ ಸಿಬ್ಬಂದಿ ಅವಕಾಶ ಕಲ್ಪಿಸದ ಹಿನ್ನೆಲೆಯಲ್ಲಿ ಅವರೂ ವಾಪಸ್ಸಾದರು.
ಈ ಮಧ್ಯೆಯೇ ಶಿವಕುಮಾರ್ ನಿವಾಸದ ಮೇಲಿನ ಐಟಿ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ‘ಯಾವುದೇ ಮನೆಯ ಮೇಲಿನ ದಾಳಿ ಮತ್ತು ಶೋಧಕ್ಕೆ ನನ್ನ ವಿರೋಧವಿಲ್ಲ. ಆದರೆ, ಶಿವಕುಮಾರ್ ನಿವಾಸದ ಮೇಲಿನ ದಾಳಿ ರಾಜಕೀಯ ಪ್ರೇರಿತ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
‘ಕೇಂದ್ರ ಸರಕಾರ ಆದಾಯ ತೆರಿಗೆ ಇಲಾಖೆ ಮೂಲಕ ಗುಜರಾತ್ ರಾಜ್ಯಸಭಾ ಚುನಾವಣೆ ಸಮಯದಲ್ಲಿ ಮತ್ತು ಕಾಂಗ್ರೆಸ್ ಸೋಲಿಸುವ ಉದ್ದೇಶದಿಂದ ದಾಳಿ ನಡೆಸಿದಕ್ಕೆ ನಮ್ಮ ವಿರೋಧವಿದೆ ಎಂದು ಸಿದ್ದರಾಮಯ್ಯ ಕೇಂದ್ರ ಮತ್ತು ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.
‘ಪ್ರಧಾನಿ ಮೋದಿ ಗುಜರಾತ್ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿನ ಕಾಂಗ್ರೆಸ್ ಶಾಸಕರಿಗೆ ಆತಂಕ ಹುಟ್ಟಿಸಲು ಸತತ ಮೂರು ದಿನಗಳಿಂದ ಐಟಿ ಮೂಲಕ ದಾಳಿ ಮಾಡಿಸಿದ್ದು, ಹಿಟ್ಲರ್ ನೀತಿ ಬಹಳ ದಿನಗಳ ಕಾಲ ನಡೆಯುವುದಿಲ್ಲ. ಇದು ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ತಿರುಗುಬಾಣವಾಗಲಿದೆ’
-ಝಮೀರ್ ಅಹ್ಮದ್ ಖಾನ್ ಜೆಡಿಎಸ್ ಬಂಡಾಯ ಶಾಸಕ







