ಫುಟ್‌ಪಾತ್, ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಸಂಚಾರಕ್ಕೆ ಅಡಚಣೆ
ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ದೂರು
ಮಂಗಳೂರು, ಆ. 4: ನಗರದಲ್ಲಿ ಕೆಲವು ರಸ್ತೆಗಳಲ್ಲಿ ಫುಟ್‌ಪಾತ್ ಇಲ್ಲದಿರುವುದು ಮತ್ತು ರಸ್ತೆಯ ಎರಡೂ ಕಡೆಗಳಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಿರುವುದರಿಂದ ಸುಗಮ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಶುಕ್ರವಾರ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಪೊಲೀಸ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೂರಿಕೊಂಡರು.
ರಸ್ತೆಯ ಇಕ್ಕೆಲಗಳಲ್ಲಿ ವಾಹನ ಪಾರ್ಕ್ ಮಾಡುತ್ತಿರುವ ಬಗ್ಗೆ ನಗರಾದ್ಯಂತ ತಪಾಸಣೆ ನಡೆಸಿ ರಸ್ತೆಯ ಒಂದೇ ಬದಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು. ಅಪಘಾತ ವಲಯಗಳನ್ನು ಗುರುತಿಸಿ ನಾಮ ಲಕ ಹಾಕಿಸಲು ಕ್ರಮ ವಹಿಸಲಾಗುವುದು. ನಿಗದಿದ ಮಾರ್ಗಗಳಲ್ಲಿ ಬಸ್ ಸಂಚರಿಸದಿದ್ದರೆ ಅಂತಹ ಬಸ್ಸುಗಳ ಪರವಾನಿಗೆ ರದ್ದು ಪಡಿಸಲು ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದರು.
ಪಿವಿಎಸ್ ಜಂಕ್ಷನ್- ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿ ಟ್ರಾಫಿಕ್ ಜಾಂ ಆಗುವ ಸಂದರ್ಭದಲ್ಲಿ ಬಸ್ಸುಗಳು ಜೈಲ್ ರಸ್ತೆಯ ಮೂಲಕ ಸಂಚರಿಸುವುದರಿಂದ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ವ್ಯಕ್ತಿಯೊಬ್ಬರು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಕಮಿಷನರ್ ತಿಳಿಸಿದರು.
ಕೆಲವು ಬಸ್ಸುಗಳಲ್ಲಿ ಪ್ರಯಾಣಿಕರು ಹತ್ತುವ, ಇಳಿಯುವ ಮೊದಲೇ ಬಸ್ಸನ್ನು ಮುಂದಕ್ಕೆ ಚಲಾಯಿಸಲಾಗುತ್ತಿದೆ. ಪ್ರಯಾಣಿಕರಿಗಷೆ ಇದು ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರೊಬ್ಬರು ದೂರು ಸಲ್ಲಿಸಿದರು. ಈ ವಿಷಯದ ಕುರಿತು ಬಸ್ ಮಾಲಕರ ಸಂಘದ ಗಮನಕ್ಕೆ ತರುವುದಾಗಿ ಕಮಿಷನರ್ ತಿಳಿಸಿದರು.
ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ಬಡ್ಡಿ ವ್ಯವಹಾರ ನಡೆಸುವವರು ಮನಿ ಲೆಂಡಿಂಗ್ ಕಾಯ್ದೆಯಡಿ ಪರವಾನಿಗೆ ಹೊಂದಿರಬೇಕು. ಪರವಾನಿಗೆ ಇಲ್ಲದೆ ವ್ಯವಹಾರ ನಡೆಸುವುದು ಅಕ್ರಮ. ಕಾನೂನು ಬಾಹಿರವಾಗಿ ಬಡ್ಡಿ ವ್ಯವಹಾರ ನಡೆಸುತ್ತಿರುವವರ ಬಗ್ಗೆ ಪೊಲೀಸರಿಗೆ ದೂರು ನೀಡಿ. ಕ್ರಮಕೈಗೊಳ್ಳುತ್ತೇವೆ ಎಂದರು.
ಕೆಲವು ಆಟೋ ರಿಕ್ಷಾ ಚಾಲಕರು ನಿರ್ಧಿಷ್ಟ ಪ್ರದೇಶಗಳಿಗೆ ಬಾಡಿಗೆಗೆ ಬರಲು ನಿರಾಕರಿಸುತ್ತಾರೆ ಎಂಬ ದೂರಿಗೆ ಸ್ಪಂದಿಸಿದ ಕಮಿಷನರ್ ಈ ಕುರಿತಂತೆ ರಿಕ್ಷಾ ಚಾಲಕರ ಸಂಘಟನೆಗಳನ್ನು ಕರೆದು ವಿಷಯ ತಿಳಿಸಲಾಗುವುದು ಎಂದರು.
ಡಿಸಿಪಿ ಹನುಮಂತರಾಯ, ಸಂಚಾರ ವಿಭಾಗದ ಎಸಿಪಿ ತಿಲಕ್ ಚಂದ್ರ, ಸಂಚಾರ ಪೂರ್ವ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್, ಸಿಸಿಆರ್‌ಬಿ ವಿಭಾಗದ ಇನ್ಸ್‌ಪೆಕ್ಟರ್ ಸವಿತ್ರತೇಜ, ಎಎಸ್‌ಐ ಯೂಸುಫ್, ಹೆಡ್‌ಕಾನ್ಸ್‌ಟೆಬಲ್ ಪುರುಷೋತ್ತಮ ಉಪಸ್ಥಿತರಿದ್ದರು.







