‘ಲುಕ್‌ಔಟ್ ನೋಟಿಸ್’ ವಿರುದ್ಧ ಕಾರ್ತಿ ಚಿದಂಬರಮ್ ಹೈಕೋರ್ಟ್‌ಗೆ ಅರ್ಜಿ

ಹೊಸದಿಲ್ಲಿ, ಆ.4: ಸಿಬಿಐ ಸಲ್ಲಿಸಿದ್ದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವಾಲಯವು ತನ್ನ ವಿರುದ್ಧ ಜಾರಿಗೊಳಿಸಿರುವ ‘ಲುಕ್‌ಔಟ್’ ನೋಟಿಸ್ ವಿರುದ್ದ ಕಾರ್ತಿ ಚಿದಂಬರಮ್ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಕಾರ್ತಿ ಚಿದಂಬರಮ್ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಮ್ ಪುತ್ರ. ಈ ಹಿಂದೆ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣದ ರದ್ದತಿ ಕೋರಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಚಿದಂಬರಮ್ ವಿತ್ತ ಸಚಿವರಾಗಿದ್ದ ಸಂದರ್ಭ , ಮಾರಿಷಸ್‌ನಿಂದ ನಿಧಿ ಪಡೆಯಲು ‘ಐಎನ್‌ಎಕ್ಸ್’ ಮಾಧ್ಯಮ ಸಂಸ್ಥೆಗೆ ‘ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ’ ಅನುಮತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಕಾರ್ತಿಗೆ ಜುಲೈ 21ರಂದು ಸಿಬಿಐ ಸಮನ್ಸ್ ನೀಡಿತ್ತು. ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ ಒಡೆತನದ ‘ಐಎನ್‌ಎಕ್ಸ್’ ಮಾಧ್ಯಮ ಸಂಸ್ಥೆಯಿಂದ ಕಾರ್ತಿ ಪರೋಕ್ಷ ಒಡೆತನ ಹೊಂದಿದ್ದ ಸಂಸ್ಥೆಗೆ ಹಣ ಸಂದಾಯವಾಗಿದೆ ಎಂದು ಸಿಬಿಐ ಆರೋಪಿಸಿದೆ. ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಚಿದಂಬರಮ್ , ಸರಕಾರ ತನ್ನ ಮಗನ ವಿರುದ್ಧ ಸಿಬಿಐ ಮತ್ತಿತರ ಸಂಸ್ಥೆಗಳನ್ನು ಛೂ ಬಿಟ್ಟಿದೆ ಎಂದು ಟೀಕಿಸಿದ್ದರು.





