ಕಿರುಕುಳ ಆರೋಪ: ಇಮ್ರಾನ್ ವಿರುದ್ಧ ತನಿಖೆಗೆ ಸಮಿತಿ

ಇಸ್ಲಾಮಾಬಾದ್, ಆ. 4: ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ನಾಯಕ ಇಮ್ರಾನ್ ಖಾನ್ ವಿರುದ್ಧ ಅವರದೇ ಪಕ್ಷದ ಮಹಿಳಾ ಸಂಸದರೊಬ್ಬರು ಮಾಡಿರುವ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸುವ ನಿರ್ಣಯವೊಂದನ್ನು ಪಾಕಿಸ್ತಾನ ಸಂಸತ್ತು ಶುಕ್ರವಾರ ಅಂಗೀಕರಿಸಿದೆ.
ಇಮ್ರಾನ್‌ರ ಪಕ್ಷದಲ್ಲಿರುವ ಮಹಿಳೆಯರು ನಿರಂತರವಾಗಿ ಕಿರುಕುಳ ಎದುರಿಸುತ್ತಿದ್ದಾರೆ ಎಂಬುದಾಗಿ ನ್ಯಾಶನಲ್ ಅಸೆಂಬ್ಲಿ ಸದಸ್ಯೆ ಆಯಿಶಾ ಗುಲಾಲೈ ಮಂಗಳವಾರ ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ. ಬಳಿಕ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಇಮ್ರಾನ್ ಖಾನ್ ತನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
ಸಂಸದೆ ಆರೀಫಾ ಖಾಲಿದ್ ಪರ್ವೇಝ್ ನಿರ್ಣಯವನ್ನು ಮಂಡಿಸಿದರು ಹಾಗೂ ಅದನ್ನು ಸದನ ಅಂಗೀಕರಿಸಿತು.
ಈ ವಿಷಯದ ಬಗ್ಗೆ ಮಾತನಾಡಿದ ಪ್ರಧಾನಿ ಖಾಕನ್ ಅಬ್ಬಾಸಿ, ಈ ಪ್ರಕರಣವು ಸದನದ ಘನತೆಯನ್ನು ಘಾಸಿಗೊಳಿಸಿದೆ ಎಂದರು. ಕಿರುಕುಳ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ ಎಂದರು.
ಸಂಸದೆಗೆ ಪೊಲೀಸ್ ರಕ್ಷಣೆ
ಇಮ್ರಾನ್ ಖಾನ್ ವಿರುದ್ಧ ಆರೋಪ ಮಾಡಿದ ಬಳಿಕ ಗುಲಾಲೈಗೆ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ ಪ್ರಧಾನಿ, ಅವರಿಗೆ ರಕ್ಷಣೆ ನೀಡುವಂತೆ ಪಂಜಾಬ್ ಪೊಲೀಸ್ ಮಹಾ ನಿರೀಕ್ಷಕರಿಗೆ ಆದೇಶ ನೀಡಲಾಗಿದೆ ಎಂದರು.







