ಅಂಕದ ಆಸೆಯಿಂದ ಸಮಾಜ ಸೇವೆ ಅಸಾಧ್ಯ: ಅದಮಾರು ಶ್ರೀ

ಉಡುಪಿ, ಆ.4: ಸ್ವಚ್ಛತೆ ಎಂಬುದು ನಮ್ಮ ಮನೆ ಹಾಗೂ ನೆರೆಮನೆಯಿಂದ ಆರಂಭವಾಗಬೇಕು. ಇದರಿಂದ ನಾವು ದೈಹಿಕವಾಗಿ ಮಾತ್ರವಲ್ಲ ಮಾನಸಿಕ ವಾಗಿಯೂ ಆರೋಗ್ಯವಂತರಾಗಿರಲು ಸಾಧ್ಯ. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಕೇವಲ ಅಂಕದ ಆಸೆಯೊಂದಿಗೆ ಸಮಾಜ ಸೇವೆಯನ್ನು ಮುಂದುವರೆಸಲು ಸಾಧ್ಯ ವಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಅದಮಾರು ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನೆಯನ್ನು ಶುಕ್ರವಾರ ವಿಭುದೇಶತೀರ್ಥ ಸಭಾಂಗಣದಲ್ಲಿ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ನಿಕೇತನ ಆಶಯ ಭಾಷಣ ಮಾಡಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಅಂಕವನ್ನು ಮಾತ್ರ ಗುರಿಯನ್ನಾಗಿಟ್ಟುಕೊಳ್ಳದೆ ಹಳ್ಳಿಯ ಕಡೆ ಗಮನ ಕೊಟ್ಟು ಕೃಷಿ ಜೊತೆ ಸಂಪರ್ಕ ಇಟ್ಟು ಕೊಳ್ಳಬೇಕು. ಇದರಿಂದ ನಮ್ಮಲ್ಲಿರುವ ಸಾಕಷ್ಟು ಪೂರ್ವಾ ಗ್ರಹಗಳನ್ನು ತೊರೆಯಲು ಸಾಧ್ಯವಾಗುತ್ತದೆ ಎಂದರು.
ಎನ್‌ಎಸ್‌ಎಸ್ ಮೂಲಕ ಸಾಮಾನ್ಯ ವ್ಯಕ್ತಿಯೊರ್ವ ಅಸಾಮಾನ್ಯ ನಾಯಕನಾಗಿ ಮತ್ತು ಧನಾತ್ಮಕವಾಗಿ ಬೆಳೆಯಬಹುದಾಗಿದೆ. ನಮ್ಮಲ್ಲಿರುವ ಕೀಳರಿಮೆ ದೂರ ಮಾಡಿ ಸಾಮರ್ಥ್ಯವನ್ನು ಅರಿಯಲು ಸಾಧ್ಯವಾಗುತ್ತದೆ. ಜೊತೆಗೆ ಜಾತಿ, ಧರ್ಮ, ಲಿಂಗದ ಗೋಡೆಯನ್ನು ಉರುಳಿಸಿ ಸಮಾನತೆಯನ್ನು ಸಾಧಿಸಲು ಇದ ರಿಂದ ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಸುಕನ್ಯಾ ಮೇರಿ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಕುಮಾರ್, ಎನ್‌ಎಸ್‌ಎಸ್ ನಾಯಕರಾದ ಪ್ರಕಾಶ್, ಉದಯ, ಶ್ರೇಯಾ, ಸುಶ್ಮಿತಾ ಮೊದಲಾದ ವರು ಉಪಸ್ಥಿತರಿದ್ದರು.
ಎನ್‌ಎಸ್‌ಎಸ್ ಯೋಜನಾಧಿಕಾರಿ ರಮಾನಂದ ರಾವ್ ಸ್ವಾಗತಿಸಿದರು. ಯೋಜನಾಧಿಕಾರಿ ಮಲ್ಲಿಕಾ ವಂದಿಸಿದರು. ವಿದ್ಯಾರ್ಥಿನಿ ಮೇಧಾಶ್ರೀ ಕಾರ್ಯ ಕ್ರಮ ನಿರೂಪಿಸಿದರು.







