ಕನ್ನಡಿಗರ ಹೋರಾಟಕ್ಕೆ ಮಣಿದ ನಮ್ಮ ಮೆಟ್ರೊ: ಹಿಂದಿ ಫಲಕಗಳ ತೆರವು

ಬೆಂಗಳೂರು, ಆ.4: ನಮ್ಮ ಮೆಟ್ರೋದಲ್ಲಿನ ಹಿಂದಿ ಹೇರಿಕೆ ಬಗ್ಗೆ ನಡೆದ ಹೋರಾಟ ಫಲ ನೀಡಿದ್ದು, ಮೆಟ್ರೋ ನಿಲ್ದಾಣಗಳಲ್ಲಿನ ಹಿಂದಿ ನಾಮಫಲಕಗಳನ್ನು ತೆರವುಗೊಳಿಸಲಾಗುತ್ತಿದೆ.
ಚಿಕ್ಕಪೇಟೆ ಸೇರಿದಂತೆ ನಗರದ ಹಲವು ಮೆಟ್ರೋ ನಿಲ್ದಾಣಗಳಲ್ಲಿನ ನಾಮಫಲಕಗಳನ್ನು ಶುಕ್ರವಾರ ತೆರವು ಮಾಡಲಾಗುತ್ತಿದ್ದು, ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿರುವ ಫಲಕಗಳನ್ನು ಅಳವಡಿಸಲಾಗುತ್ತಿದೆ. ಬೆಂಗಳೂರಿನ ನಮ್ಮ ಮೆಟ್ರೋ ಮೇಲೆ ಹಿಂದಿ ಹೇರಿಕೆ ಮಾಡುವುದನ್ನು ಖಂಡಿಸಿ ಬೃಹತ್ ಹೋರಾಟ ನಡೆದಿತ್ತು. ಅಲ್ಲದೆ, ಹಿಂದಿ ಹೇರಿಕೆಯನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದರು. ಇಂಗ್ಲಿಷ್ ಮತ್ತು ಕನ್ನಡದಲ್ಲಿರುವ ನಾಮಫಲಕಗಳನ್ನು ಮಾತ್ರ ಹಾಕಲಾಗುತ್ತದೆ ಎಂದು ಹೇಳಿದ್ದರು.
‘ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ನಾಮಫಲಕಗಳನ್ನು ತೆರವುಗೊಳಿಸುತ್ತಿರುವುದು ಖುಷಿ ತಂದಿದೆ. ಇದೇ ರೀತಿಯಾಗಿ ಬ್ಯಾಂಕ್‌ಗಳಲ್ಲೂ ಹಿಂದಿ ನಾಮ ಫಲಕಗಳನ್ನು ತೆರವುಗೊಳಿಸಬೇಕು. ಹಾಗೂ ಬ್ಯಾಂಕ್‌ನ ವ್ಯವಸ್ಥಾಪಕರು ಕಡ್ಡಾಯವಾಗಿ ಕನ್ನಡ ಕಲಿಯಬೇಕು.
-ವಾಟಾಳ್ ನಾಗರಾಜ್





