ಕಾವೇರಿ ಅಚ್ಚುಕಟ್ಟಿನ ಪ್ರದೇಶ ಕೃಷಿಗೆ ನೀರು: ಆ.14 ರಂದು ಸರ್ವಪಕ್ಷ ಸಭೆ

ಬೆಂಗಳೂರು, ಆ.4: ಕುಡಿಯಲು ಮತ್ತು ಜಾನುವಾರುಗಳಿಗಾಗಿ ಮಾತ್ರ ನಾಳೆಯಿಂದ ಹೇಮಾವತಿ ಮೇಲ್ದಂಡೆ ನಾಲೆಗೆ ನೀರು ಹರಿಸಲು ಸರಕಾರ ತೀರ್ಮಾನಿಸಿದೆ. ಕಾವೇರಿ ಅಚ್ಚುಕಟ್ಟಿನ ಪ್ರದೇಶದ ಕೃಷಿಗೆ ನೀರು ಹರಿಸುವ ಸಂಬಂಧ ಆ.14ರಂದು ಸರ್ವ ಪಕ್ಷ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನೀರಾವರಿ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಕಾವೇರಿ ಅಚ್ಚುಕಟ್ಟಿನ ನೀರಾವರಿ ಇಲಾಖೆಯ ಅಧಿಕಾರಿಗಳು, ಶಾಸಕರು, ಉಸ್ತುವಾರಿ ಸಚಿವರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
96 ಕಿ.ಮೀ ಇರುವ ಹೇಮಾವತಿ ಮೇಲ್ದಂಡೆಯ ಎಲ್ಲ ಕೆರೆ ಕೊಳ್ಳಗಳಿಗೆ ಶನಿವಾರ ಸಂಜೆಯಿಂದ ಪ್ರತಿ ದಿನ ಒಂದು ಟಿಎಂಸಿಯಂತೆ 10 ದಿನಗಳ ಕಾಲ 10 ಟಿಎಂಸಿ ನೀರು ಹರಿಸಲಾಗುವುದು. ಆದರೆ ಮೇಲ್ದಂಡೆಯ ಉಪ ಕಾಲುವೆಗಳಿಗೆ ನೀರು ಹರಿಸಲಾಗುವುದಿಲ್ಲ. ಇದಕ್ಕೆ ರೈತರು ಸಹಕರಿಸಬೇಕು ಎಂದು ಸರಕಾರ ಮನವಿ ಮಾಡಿದೆ.
ಸಭೆ ಬಳಿಕ ನೀರಾವರಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ 43 ಟಿಎಂಸಿ ನೀರು ಮಾತ್ರ ಇದೆ. ಹೀಗಿರುವ ನೀರಿನಲ್ಲಿ 32 ಟಿಎಂಸಿ ನೀರು ಬೆಂಗಳೂರು, ಮೈಸೂರು ನಗರ ಸೇರಿದಂತೆ ಇತರೆ ಪುರಸಭೆಗಳಿಗೆ ಕುಡಿಯಲು ಹರಿಸಬೇಕಿದೆ ಎಂದು ತಿಳಿಸಿದರು.
ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ ಇರುವ ನೀರಿನ ಪ್ರಮಾಣ 40 ವರ್ಷಗಳಲ್ಲಿ ಅತ್ಯಂತ ಕಡಿಮೆ. ಆಗಸ್ಟ್ ತಿಂಗಳ ವೇಳೆಗೆ 120 ಟಿಎಂಸಿ ನೀರು ಲಭ್ಯವಿರುತ್ತಿತ್ತು. ಈ ನೀರಿನ ಪ್ರಮಾಣದಲ್ಲಿ 90 ಟಿಎಂಸಿಯಷ್ಟು ಕೃಷಿಗೆ ಹರಿಸಲಾಗುತ್ತಿತ್ತು. ವಾಡಿಕೆಗಿಂತ ಈ ಬಾರಿ ಕಾವೇರಿ ಕಣಿವೆಯ ಪ್ರದೇಶದಲ್ಲಿ ಶೇ.53ರಷ್ಟು ಮಳೆ ಕೊರತೆಯಿರುವುದರಿಂದ ಕೃಷಿಗೆ ನೀರು ಹರಿಸುತ್ತಿಲ್ಲ. ಹವಾಮಾನ ಇಲಾಖೆಯ ಪ್ರಕಾರ ಮುಂದಿನ ಐದು ದಿನಗಳೊಳಗೆ ಮಳೆ ಬರುವ ನಿರೀಕ್ಷೆಯಿದೆ. ಕಾದು ನೋಡೋಣ ಎಂದು ಹೇಳಿದರು.
ಕಾವೇರಿ ನ್ಯಾಯಾಧೀಕರಣದಂತೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಈ ವೇಳೆಗೆ 19 ಟಿಎಂಸಿ ನೀರು ತಮಿಳುನಾಡಿಗೆ ಹರಿಸಬೇಕಿತ್ತು. ಆದರೆ ರಾಜ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 10 ಟಿಎಂಸಿ ನೀರನ್ನು ಮಾತ್ರ ಹರಿಸಲಾಗಿದೆ ಎಂದು ತಿಳಿಸಿದರು.
ಮಳೆ ವಿಳಂಬದಿಂದಾಗಿ ಹೇಮಾವತಿ ಮೇಲ್ದಂಡೆ ಪ್ರದೇಶದಲ್ಲಿ ಇನ್ನೂ ಭತ್ತ ಮತ್ತು ಕಬ್ಬು ಬೇಸಾಯ ಮಾಡಿಲ್ಲ. ಹೀಗಾಗಿ ಕುಡಿಯಲು ಮತ್ತು ಜಾನುವಾರುಗಳಿಗಾಗಿ ನೀರು ಬಿಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ರೈತ ಮುಖಂಡರು, ರೈತರು ಸರಕಾರಕ್ಕೆ ಪತ್ರ ಬರೆದಿದ್ದರು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಸಚಿವರಾದ ಟಿ.ಬಿ.ಜಯಚಂದ್ರ, ಡಾ.ಎಚ್.ಸಿ.ಮಹದೇವಪ್ಪ, ಎ.ಮಂಜು, ಯು.ಟಿ.ಖಾದರ್, ಎಂ.ಆರ್.ಸೀತಾರಾಮ್, ಕೃಷ್ಣ ಬೈರೇಗೌಡ, ಆಂಜನೇಯ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.







