ಯಲಹಂಕ ಪೊಲೀಸರ ವಿರುದ್ಧ ದೂರು: ಅಂಗಡಿಗೆ ನುಗ್ಗಿ ಚಿನ್ನ, ನಗದು ದೋಚಿದ ಆರೋಪ
ಮಂಗಳೂರು, ಆ. 4: ಬೆಂಗಳೂರಿನ ಯಲಹಂಕ ಠಾಣೆಯ ಪೊಲೀಸರು ಚಿನ್ನದ ಗುಣಮಟ್ಟ ಪರಿಶೀಲನೆ ಮಾಡುವ ಅಂಗಡಿಗೆ ನುಗ್ಗಿ ಸಿಬಂದಿಗೆ ದೈಹಿಕ ಹಲ್ಲೆ ನಡೆಸಿ 180 ಗ್ರಾಂ. ಚಿನ್ನದ ಗಟ್ಟಿ, 55,250 ರೂ. ಹಾಗೂ ಅಲ್ಲಿನ ಸಿಬ್ಬಂದಿಯ ಮೊಬೈಲ್ ಫೋನ್ ದೋಚಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರ ಈ ಕೃತ್ಯದ ವಿರುದ್ಧ ಮಂಗಳೂರು ಜಿಎಚ್ಎಸ್ ಕ್ರಾಸ್ ನಲ್ಲಿರುವ ಎಂಟಿಸಿ ಗೋಲ್ಡ್ ಟೆಸ್ಟಿಂಗ್ ಅಂಗಡಿಯ ಪಾಲುದಾರ ಎ.ಸತೀಶ್ ರಾವ್ ಡಿಜಿಪಿ ಹಾಗೂ ಐಜಿಪಿ ಮತ್ತು ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ.
ಜುಲೈ 19ರಂದು ಸಂಜೆ 5 ಗಂಟೆಯ ಸುಮಾರಿಗೆ ಕಾರಿನಲ್ಲಿ ಬಂದ ಆರು ಮಂದಿಯ ತಂಡ ಎಂಟಿಸಿ ಗೋಲ್ಡ್ ಟೆಸ್ಟಿಂಗ್ ಅಂಗಡಿಗೆ ಬಂದು ಚಿನ್ನದ ಗುಣಮಟ್ಟ ಪರಿಶೀಲನೆಯ ನೆಪ ಒಡ್ಡಿ ಅಂಗಡಿಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, 180 ಗ್ರಾಂ ಚಿನ್ನದ ಗಟ್ಟಿ ಮತ್ತು 55,250 ರೂ. ನಗದು ದೋಚಿದ್ದಾರೆ ಎಂದು ಸತೀಸ್ ರಾವ್ ಆರೋಪಿಸಿದ್ದಾರೆ.
ಈ ಬಗ್ಗೆ ಅವರು ಬೆಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿ ಸೊತ್ತುಗಳನ್ನು ವಾಪಾಸು ಕೊಡಿಸುವಂತೆ ಮನವಿ ಮಾಡಿದ್ದಾರೆ.





