ಬೆಳೆ ವಿಮೆ ಕುರಿತು ರೈತರಲ್ಲಿ ಅರಿವು ಮೂಡಿಸಲು ಹೆಚ್ಚು ಪ್ರಚಾರ ಕೈಗೊಳ್ಳಬೇಕು: ರಾಜೀವ್ ಚಾವ್ಲಾ

ಚಿಕ್ಕಮಗಳೂರು, ಆ.5: ಬೆಳೆ ವಿಮೆ ಪಾವತಿಸುವ ಕುರಿತು ರೈತರಿಗೆ ಅರಿವು ಇರುವುದಿಲ್ಲ. ಆದ್ದರಿಂದ ಪ್ರತಿ ಹಳ್ಳಿಗಳಲ್ಲಿಯೂ ಬೆಳೆ ವಿಮೆಯಿಂದಾಗುವ ಯೋಜನೆಗಳ ಕುರಿತು ರೈತರಲ್ಲಿ ಅರಿವು ಮೂಡಿಸಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಮಾಡಿಸುವಂತೆ ಪ್ರೇರೇಪಿಸಬೇಕು. ಬೆಳೆ ವಿಮೆ ಕುರಿತು ರೈತರಲ್ಲಿ ಅರಿವು ಮೂಡಿಸಲು ಹೆಚ್ಚು ಪ್ರಚಾರ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್ ಚಾವ್ಲಾ ತಿಳಿಸಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2016-17 ನೇ ಸಾಲಿನಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರ ಹಣ ರೈತರ ಖಾತೆಗೆ ಜಮಾ ಆಗಿದೆಯೇ ಎಂದು ಪರಿಶೀಲಿಸಬೇಕು. ಒಂದು ವೇಳೆ ರೈತರ ಖಾತೆಗೆ ಜಮಾ ಆಗದೆ ಬೇರೆ ಯವರ ಖಾತೆಗೆ ಜಮಾ ಆಗಿದ್ದರೆ ಫಲಾನುಭವಿ ರೈತರಿಗೆ ತಲುಪಿಸುವ ವ್ಯವಸ್ಥೆ ಆಗಬೇಕು. ರೈತರ ಆಧಾರ್ ಸಂಖ್ಯೆ, ಹೆಸರು, ಪಹಣಿಯಲ್ಲಿ ನಮೂದಿಸಿರುವ ಸ.ನಂ, ಬ್ಯಾಂಕ್ ಖಾತೆಗೆ ಜೋಡಣೆಯಾಗಿರುವ ಕುರಿತು ಪರಿಶೀಲಿಸಬೇಕು. ಬರ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದ್ದರೆ ತಪ್ಪು ಮಾಡಿರುವವರ ವಿರುದ್ಧ ಕ್ರಮ ಜರುಗಿಸುವಂತೆ ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿದೇರ್ಶಕಿ ಸೀತಾ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಜುಲೈ ಮಾಹೆಯ ಅಂತ್ಯದವರೆಗೆ ಶೇ.41 ರಷ್ಟು ಮಳೆಯ ಕೊರತೆ ಉಂಟಾಗಿದ್ದು 1, 51, 810, ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಾಗಿತ್ತು ಆದರೆ 63,685 ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿದೆ ಕಳೆದ 2016 ರಲ್ಲಿ ಜುಲೈ ಮಾಹೆ ಅಂತ್ಯಕೆ 88,466 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿ-22 ಪ್ರಮಾಣ ಮಾತ್ರ ಮಳೆಯ ಕೊರತೆ ಉಂಟಾಗಿತ್ತು. ಕಡೂರು ತರೀಕೆರೆ ಭಾಗದಲ್ಲಿ ರಾಗಿಯನ್ನು ಆಗಸ್ಟ್ ಮಾಹೆಯ ಅಂತ್ಯದವರೆಗೆ ಬಿತ್ತನೆ ಮಾಡಲಾಗುತ್ತದೆ. ಮಲೆನಾಡು ಭಾಗದಲ್ಲಿ ಭತ್ತ ಬಿತ್ತನೆ ಮಾಡುತ್ತಾರೆ. ರಸ ಗೊಬ್ಬರ ಹಾಗೂ ಬಿತ್ತನೆ ಬೀಜ ದಾಸ್ತಾನಿದ್ದು ಯಾವುದೇ ಸಮಸ್ಯೆ ಇರುವುದಿಲ್ಲ ಎಂದರು.
ಆಲುಗೆಡ್ಡೆ, ಈರುಳಿ ಬಿತ್ತನೆ ಪ್ರಮಾಣ ಶೇ. 64 ಆಗಿದ್ದು ಕಳೆದ ಬಾರಿ ಇದೇ ಅವಧಿಯಲ್ಲಿ ಶೇ. 94 ರಷ್ಟು ಬಿತ್ತನೆಯಾಗಿತ್ತು ಮಳೆಯ ಕೊರತೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ ಎಂದು ತೋಟಗಾರಿಕೆ ಉಪನಿರ್ದೇಶಕರು ಮಾಹಿತಿ ನೀಡಿದರು.
ಪ್ರಭಾರ ಜಿಲ್ಲಾಧಿಕಾರಿ ಡಾ. ಆರ್.ರಾಗಪ್ರಿಯ ಮಾತನಾಡಿ, ಕುಡಿಯುವ ನೀರಿಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ತಾಲ್ಲೂಕಿನಲ್ಲಿ 124 ಗ್ರಾಮಗಳಲ್ಲಿ ಸಮಸ್ಯೆ ಇದ್ದು 15 ಗ್ರಾಮಗಳಿಗೆ, ಕಡೂರಿನಲ್ಲಿ 131 ಗ್ರಾಮಗಳನ್ನು ಗುರುತಿಸಲಾಗಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಉಳಿದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಉಪ ವಿಭಾಗಾಧಿಕಾರಿ ಸಂಗಪ್ಪ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
‘ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಮುಂಗಾರು ಹಂಗಮಿನಲ್ಲಿ 8855 ಅರ್ಜಿಗಳು ಬಂದಿದ್ದು ಒಟ್ಟು 4059.7 ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೋಂದಾಯಿಸಲಾಗಿತ್ತು ಇಲ್ಲಿಯವರೆಗೆ 848 ರೈತರಿಗೆ 66.73 ಲಕ್ಷ ರೂಗಳ ಪರಿಹಾರ ಮಂಜೂರಾಗಿದ್ದು 541 ರೈತರ ಬ್ಯಾಂಕ್ ಖಾತೆಗೆ ರೂ. 54.61 ಲಕ್ಷಗಳನ್ನು ವರ್ಗಾಯಿಸಲಾಗಿದೆ. ಅದೇ ರೀತಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ 14207 ಅರ್ಜಿಗಳಲ್ಲಿ 38807 ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೋಂದಾಯಿಸಲಾಗಿದ್ದು 10930 ರೈತರಿಗೆ 35 ಕೋಟಿ ವಿಮಾ ಪರಿಹಾರ ಮಂಜೂರಾಗಿದೆ. 2893 ರೈತರಿಗೆ 10 ಕೋಟಿ ಪರಿಹಾರವನ್ನು ರೈತರ ಖಾತೆಗೆ ವಿಮಾ ಕಂಪನಿಯಿಂದ ವರ್ಗಾಯಿಸಲಾಗಿದೆ. ಉಳಿದ ವಿಮಾ ಮೊತ್ತವನ್ನು ಕೂಡಲೇ ಸಂಬಂಧಿಸಿದ ರೈತರ ಖಾತೆಗಳಿಗೆ ಜಮಾ ಮಾಡಬೇಕು’
ರಾಜೀವ್ ಚಾವ್ಲಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಚಿಕ್ಕಮಗಳೂರು.







