ಕಾವ್ಯಾ ಪ್ರಕರಣ: ವಿಶೇಷ ತಂಡ ರಚನೆಗೆ ಒತ್ತಾಯ

ಮಂಗಳೂರು, ಆ. 5: ಯೆಯ್ಯಾಡಿ- ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ 10ನೆ ತರಗತಿ ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ಅಸಹಜ ಸಾವಿನ ಸಮಗ್ರ ತನಿಖೆಗೆ ವಿಶೇಷ ತಂಡ ರಚನೆ ಹಾಗೂ ಕಾವ್ಯಾಳ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಡಿವೈಎಫ್‌ಐ ಯೆಯ್ಯಾಡಿ-ಕೊಂಚಾಡಿ ಘಟಕದಿಂದ ಧರಣಿ ನಡೆಯಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಕಾವ್ಯಾ ಅಸಹಜ ಸಾವು ಮತ್ತು ಈ ಹಿಂದೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಎಲ್ಲಾ ಅಸಹಜ ಸಾವು ಪ್ರಕರಣಗಳ ನಿಸ್ಪಕ್ಷಪಾತ ತನಿಖೆಯಾಗಬೇಕೆಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು. ಡಿವೈಎಫ್‌ಐನ ಮಂಗಳೂರು ನಗರ (ಉತ್ತರ)ದ ಅಧ್ಯಕ್ಷ ನವೀನ್ ಬೊಳ್ಪುಗುಡ್ಡೆ ಮಾತನಾಡಿ, ಪ್ರಕರಣ ನಡೆದ ಸಂಧರ್ಭ ಆಳ್ವಾಸ್ ಆಡಳಿತ ಮಂಡಳಿ ನಡೆದುಕೊಂಡ ರೀತಿ ಹಾಗೂ ತೋರಿದ ದುವರ್ತನೆಯನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್‌ಐನ ಯೆಯ್ಯಾಡಿ-ಕೊಂಚಾಡಿ ಘಟಕದ ಮುಖಂಡರಾದ ಗಣೇಶ್ ಕೊಪ್ಪಲಕಾಡು, ಪದ್ಮನಾಭ, ಸುನಂದ, ಪ್ರವೀಣ್, ಪಾಂಡುರಂಗ ಕೊಂಚಾಡಿ ಉಪಸ್ಥಿತರಿದ್ದರು. ಶಶಿಕುಮಾರ್ ಗುಂಡಳಿಕೆ ಸ್ವಾಗತಿಸಿ, ವಂದಿಸಿದರು.





