ಕೇಂದ್ರದ ಸರ್ವಾಧಿಕಾರ ಧೋರಣೆ ವಿರುದ್ಧ ಪ್ರಬಲ ವಿದ್ಯಾರ್ಥಿ ಹೋರಾಟ ಅಗತ್ಯ: ಚನ್ನಮಲ್ಲ ಸ್ವಾಮಿ

ಬೆಂಗಳೂರು, ಆ.5: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆ ಮಿತಿ ಮೀರಿದ್ದು, ಇದರ ವಿರುದ್ಧ ದೇಶದ ಎಲ್ಲ ಪ್ರಗತಿಪರ ಸಂಘಟನೆಗಳು ಪ್ರಬಲವಾದ ಐಕ್ಯ ಹೋರಾಟ ಮಾಡಬೇಕಾಗಿದೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮಿ ತಿಳಿಸಿದ್ದಾರೆ.
ಅಖಿಲ ಭಾರತ ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ‘ವಿದ್ಯಾರ್ಥಿ ಹೋರಾಟಗಳ ರಾಷ್ಟ್ರೀಯ ಸಮಾವೇಶ’ದ ಅಂಗವಾಗಿ ನಗರದ ರೈಲ್ವೆ ನಿಲ್ದಾಣದಿಂದ ಶಿಕ್ಷಕರ ಸದನದವರೆಗೆ ಆಯೋಜಿಸಿದ್ದ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಮಿತಿಮೀರಿದೆ. ಅಭಿವ್ಯಕ್ತಿ ಸ್ವಾತಂತ್ರ ಧಮನಿಸುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಇವುಗಳನ್ನು ತಡೆಯಬೇಕಾದರೆ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ. ಹೀಗಾಗಿ ದೇಶಾದ್ಯಂತ ಎಲ್ಲ ಪ್ರಗತಿಪರ ವಿದ್ಯಾರ್ಥಿಗಳು ಐಕ್ಯಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ದೇಶದ ಸ್ವಾತಂತ್ರಕ್ಕಾಗಿ ವಿದ್ಯಾರ್ಥಿಗಳು ನಡೆಸಿದ ಹೋರಾಟದ ಮಾದರಿ ಇವತ್ತಿಗೆ ಅಗತ್ಯವಿದೆ. ಲಕ್ಷಾಂತರ ವಿದ್ಯಾರ್ಥಿಗಳ ತ್ಯಾಗ-ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ ಸಿಕ್ಕಿದೆ. ಅದೇ ಮಾದರಿಯಲ್ಲಿ ಇಂದು ಕೋಮುವಾದಿಗಳು ಹಾಗೂ ಬಂಡವಾಳಶಾಹಿಗಳ ವಿರುದ್ಧ ರಾಜಿರಹಿತ ಹೋರಾಟಕ್ಕಾಗಿ ವಿದ್ಯಾರ್ಥಿಗಳು ಸಜ್ಜುಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಎಡಪಂಥಿಯ ವಿದ್ಯಾರ್ಥಿ ಸಂಘಟನೆಗಳು ಹಾಗೂ ಅಂಬೇಡ್ಕರ್ ಸಂಘಟನೆಗಳು ಒಗ್ಗೂಡಿ ಕೋಮುವಾದಿಗಳ ವಿರುದ್ಧ ಹೋರಾಟ ಮಾಡುತ್ತಿರುವುದು ಹೊಸ ಭರವಸೆಯನ್ನು ಮೂಡಿಸಿದೆ. ಈ ಸಂಘಟನೆಗಳು ದೇಶಾದ್ಯಂತ ವ್ಯಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಒಳಗೊಳಿಸಿಕೊಂಡು ಬೃಹತ್‌ಮಟ್ಟದ ಹೋರಾಟ ರೂಪಿಸಬೇಕಾಗಿದೆ ಎಂದು ಅವರು ಹೇಳಿದರು.
ಜಾಥಾದಲ್ಲಿ ಪ್ರಗತಿಪರ ಹೋರಾಟಗಾರ ಶ್ರೀಪಾದ್ ಭಟ್, ಕರ್ನಾಟಕ ಜನಶಕ್ತಿಯ ಎಚ್.ವಿ.ವಾಸು, ಮಲ್ಲಿಗೆ ಸಿರಿಮನೆ, ಕೆವಿಎಸ್, ಬಿವಿಎಸ್, ಎಸ್‌ಐಒ, ಎಎಸ್‌ಐ, ಹಶ್ಮಿ ಕಲಾ ಬಳಗ-ಸೇಂಟ್ ಜೋಸೆಫ್ ಕಾಲೇಜು ಹಾಗೂ ಯುವ ಮುನ್ನಡೆ ಸಂಘಟನೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಒಬ್ಬ ಬಡ ರೈತ, ಕೂಲಿಕಾರ್ಮಿಕನ ಮಗ ಯಾವ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾನೆಯೋ ಅಲ್ಲಿಯೇ ಪ್ರಧಾನಿ ಮಂತ್ರಿ, ರಾಷ್ಟ್ರಪತಿ ಹಾಗೂ ಸಚಿವರ ಮಕ್ಕಳು ಶಿಕ್ಷಣ ಕಲಿಯಬೇಕು. ಆಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ ಬಂದಿದೆ ಎಂದು ಹೇಳಬಹುದು. ಕೇಂದ್ರ ಸರಕಾರ ಶಿಕ್ಷಣ ನೀತಿಯನ್ನು ವಿದ್ಯಾರ್ಥಿಗಳನ್ನು ಆಧರಿಸಿ ರೂಪಿಸಬೇಕಾಗಿತ್ತು. ಅದರ ಬದಲಾಗಿ ಕಾರ್ಪೊರೇಟ್ ಕಂಪೆನಿಗಳ ಆಶಯದಂತೆ ರೂಪಿಸಿದ್ದಾರೆ. ಇಂತಹ ಶಿಕ್ಷಣ ನೀತಿಯ ವಿರುದ್ಧ ವಿದ್ಯಾರ್ಥಿ ಸಮುದಾಯ ಬೀದಿಗಿಳಿಯಬೇಕಾಗಿದೆ.
- ಕನ್ನಯ್ಯ ಕುಮಾರ್ ವಿದ್ಯಾರ್ಥಿ ನಾಯಕ, ಜೆಎನ್‌ಯು







