ಬಿಜೆಪಿಯ ಕುತಂತ್ರ ದಾಳಿಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲೆವು: ಸಚಿವ ಮಹದೇವಪ್ಪ

ಬೆಂಗಳೂರು, ಆ.5: ಕಾಂಗ್ರೆಸ್ ಮೇಲೆ ಬಿಜೆಪಿ ಎಂತಹ ಹುನ್ನಾರ ನಡೆಸಿ ದಾಳಿ ಮಾಡಿದರೂ, ಅದನ್ನು ಸಮರ್ಥವಾಗಿ ನಾವು ನಿಭಾಯಿಸುತ್ತೇವೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇಂದಿಲ್ಲಿ ತಿಳಿಸಿದ್ದಾರೆ.
ಶನಿವಾರ ಪ್ರೆಸ್‌ಕ್ಲಬ್ ಸುವರ್ಣ ವರ್ಷಾಚರಣೆ ಪ್ರಯುಕ್ತ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ಪರಿಶೀಲನೆಗೆ ಕಾನೂನಿನಲ್ಲಿ ಅವಕಾಶವಿದೆಯಾದರೂ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ದಾಳಿ ನಡೆಸಿರುವ ರೀತಿ ಹಾಗೂ ಸಮಯ ನೋಡಿದರೆ ಇದರಲ್ಲಿ ರಾಜಕೀಯವಿದೆ ಎಂಬುದು ಅರ್ಥವಾಗುತ್ತದೆ ಎಂದು ಅವರು ಹೇಳಿದರು. ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರಕಾರ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದೆ. ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ನಡೆದ ಐಟಿ ದಾಳಿ ಪ್ರಜಾಸತ್ತಾತ್ಮಕತೆಗೆ ಮಾರಕ. ಐಟಿ ದಾಳಿ ಒಂದು ಮಾಮೂಲು ಪ್ರಕ್ರಿಯೆ. ಆದರೆ ಭಾರತೀಯ ಜನತಾಪಕ್ಷದವರು ಬಿಜೆಪಿಯೇತರ ರಾಜ್ಯಗಳ ಮುಖಂಡರ ಮೇಲೆ ದಾಳಿ ಮಾಡಲು ಈ ಐಟಿ ಇಲಾಖೆಯನ್ನು ಪ್ರತ್ಯಸ್ತ್ರವನ್ನಾಗಿ ಬಳಕೆ ಮಾಡಿಕೊಂಡಿರುವುದು ದುರಂತ ಎಂದರು.
ಕಾನೂನುಬಾಹಿರವಾಗಿ ಆಸ್ತಿ ಮಾಡಿದ್ದರೆ ಐಟಿ ದಾಳಿ ನಡೆಯಲಿ. ಆದರೆ ಬಿಜೆಪಿ ಅವರು ದುರುದ್ದೇಶದಿಂದ ದಾಳಿ ಮಾಡಿಸಿ, ಒಂದು ಪಕ್ಷವನ್ನು ಹತ್ತಿಕ್ಕುವ ಕೆಲಸ ಮಾಡುವುದು ಸರಿಯಲ್ಲ. ಐಟಿ ದಾಳಿ ಮಾಡಿಸಲು ನೈತಿಕತೆಯೇ ಬಿಜೆಪಿಗೂ ಇಲ್ಲ. ಬಿಜೆಪಿ ಏನೇ ಪಿತೂರಿ ಮಾಡಿದರೂ ನಮ್ಮ ಕಾಂಗ್ರೆಸ್ ಪಕ್ಷ ಸಮರ್ಥವಾಗಿ ನಿಭಾಯಿಸುತ್ತದೆ. ಈ ಬಗ್ಗೆ ಯಾವುದೇ ಆತಂಕವೂ ಇಲ್ಲ. ಯಾವುದೇ ದಾಳಿಯನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ ಎಂದು ಅವರು ಹೇಳಿದರು.
ತನಿಖಾ ಸಂಸ್ಥೆಗಳು ಎಂದಿಗೂ ರಾಜಕೀಯ ಅಸ್ತ್ರವಾಗಿ ಪರಿವರ್ತನೆಗೊಳ್ಳಬಾರದು. ಗುಜರಾತ್ ಶಾಸಕರು ಇಲ್ಲಿರುವಾಗಲೇ ಅದರ ನೇತೃತ್ವ ವಹಿಸಿರುವ ಸಚಿವ. ಡಿ.ಕೆ.ಶಿವಕುಮಾರ್ ಮನೆ ಮೇಲೆ ದಾಳಿ ನಡೆದಿರುವುದರಿಂದ ಐಟಿ ದಾಳಿ ಹಿಂದೆ ರಾಜಕೀಯವಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಬಿಜೆಪಿ ವಿರುದ್ಧ ಅವರು ಹರಿಹಾಯ್ದರು.







