ಐಟಿ ಆಯ್ಕೆ ಮಾಡಿ ದಾಳಿ ನಡೆಸುವುದು ಸಲ್ಲ: ಸಚಿವ ರಮೇಶ್ ಕುಮಾರ್

ಬೆಂಗಳೂರು, ಆ. 5: ಆದಾಯ ತೆರಿಗೆ ಇಲಾಖೆ ಇದೆ ಎಂಬ ಭಯ ಅಕ್ರಮ ವ್ಯವಹಾರಸ್ಥರಿಗೆ ಇರಬೇಕು. ಜನಸಾಮಾನ್ಯರ ವಿಶ್ವಾಸವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಐಟಿ ಅಗತ್ಯವಿದ್ದಾಗ ಕೆಲವರನ್ನಷ್ಟೇ ಆಯ್ಕೆ ಮಾಡಿ ದಾಳಿ ನಡೆಸುವ ಕ್ರಮ ಸಲ್ಲ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್ ಆಕ್ಷೇಪಿಸಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಪ್ಪು ಮಾಡುವವರಿಗೆ ಆದಾಯ ತೆರಿಗೆ ಇಲಾಖೆ ಭಯ ಇರಬೇಕು. ಆಯ್ಕೆ ಮಾಡಿ ದಾಳಿ ನಡೆಸುತ್ತಾರೆ ಎಂಬ ಮನೋಭಾವ ಹೋಗಲಾಡಿಸಬೇಕು ಎಂದು ಸಲಹೆ ಮಾಡಿದರು.
ಎಲ್ಲ ಜನಪ್ರತಿನಿಧಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಆಸ್ತಿ ಘೋಷಣೆ ಮಾಡಿಕೊಂಡಿರುತ್ತಾರೆ. ಆದರೆ, ಅದು ವರ್ಷದಿಂದ ವರ್ಷಕ್ಕೆ ಹೇಗೆ ಹೆಚ್ಚಾಯಿತು ಎಂದು ಐಟಿ ಪರಿಶೀಲನೆಯನ್ನೆ ನಡೆಸುವುದಿಲ್ಲ. ಅಲ್ಲದೆ, ಅಕ್ರಮ ಆಸ್ತಿ ಗಳಿಸಿದ ವ್ಯಕ್ತಿಗಳ ಅನರ್ಹತೆಗೂ ಶಿಫಾರಸ್ಸು ಮಾಡಿದ ಉದಾಹರಣೆಗಳಿಲ್ಲ ಎಂದು ಟೀಕಿಸಿದರು.
ನಗರದ ಅರಮನೆ ರಸ್ತೆಯಲ್ಲಿನ ಅದ್ದೂರಿ ಮದುವೆಗಳು, ಕಾರ್ಪೋರೇಟ್ ಆಸ್ಪತ್ರೆಗಳು, ದೊಡ್ಡ-ದೊಡ್ಡ ಶಿಕ್ಷಣ ಸಂಸ್ಥೆಗಳು ಆದಾಯ ತೆರಿಗೆ ಇಲಾಖೆ ಕಣ್ಣಿಗೆ ಬೀಳುವುದಿಲ್ಲವೇಕೆ ಎಂದು ಪ್ರಶ್ನಿಸಿದ ಅವರು, ಇಂತಹ ಅಸಹ್ಯ ಪ್ರದರ್ಶನಗಳನ್ನು ಯಾರು ನಿಯಂತ್ರಿಸಬೇಕು ಎಂದು ಕೇಳಿದರು.







