ಪುಟ್ಟರಾಜುಗೆ ಸಂಸದ ಅಂದರೇನು ಅಂತಾನೆ ಗೊತ್ತಿಲ್ಲ:ಪುಟ್ಟಣ್ಣಯ್ಯ
ದ್ವೇಷ ರಾಜಕಾರಣ ಬಿಡುವಂತೆ ಸಲಹೆ
ಮಂಡ್ಯ, ಆ.5: ಕಣದ ಪೂಜೆ, ಡೇರಿ ಉದ್ಘಾಟನೆ, ನೀರಿನ ಟ್ಯಾಂಕ್ ಪೂಜೆಗೆ ಹೋಗುತ್ತಾ ಶಿಷ್ಟಾಚಾರ ಮರೆತು ದ್ವೇಷದ ರಾಜಕಾರಣ ಮಾಡುವ ಸಂಸದ ಸಿ.ಎಸ್.ಪುಟ್ಟರಾಜುಗೆ ಎಂ.ಪಿ. ಅಂದರೇನು ಅಂತಾನೇ ಗೊತ್ತಿಲ್ಲ ಎಂದು ಶಾಸಕ, ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಟೀಕಿಸಿದ್ದಾರೆ.
ಶನಿವಾರ ಪಾಂಡವಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ತಾಲೂಕಿನ ಸಣಬ ಗ್ರಾಮದಲ್ಲಿ ಆ.2 ರಂದು ಅಂಬೇಡ್ಕರ್ ಭವನಕ್ಕೆ ಭೂಮಿ ಪೂಜೆ ಸಲ್ಲಿಸುವಾಗ ಜೆಡಿಎಸ್ ಕಾರ್ಯಕರ್ತ ಶಿವಣ್ಣ ಎಂಬುವ ಪೂಜೆಗೆ ಅಡ್ಡಿಪಡಿಸಿದ್ದಾರೆ. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಪುಟ್ಟರಾಜು ತಮ್ಮ ಚೇಲಾಗಳ ಮೂಲಕ ಚೇಷ್ಠೆ, ಕುಚೇಷ್ಠೆಗೆ ಮುಂದಾಗಿರುವುದು ನಾಚಿಕೆಗೇಡು ಎಂದರು.
ದಲಿತರ ಸಬಲೀಕರಣಕ್ಕಾಗಿ ತಾಲೂಕಿನಲ್ಲಿ 34 ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಭವನಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿಸಿದ್ದೇನೆ. ಭವನಕ್ಕೆ ಕೇವಲ 6 ಲಕ್ಷ ಇದ್ದ ಅನುದಾನವನ್ನು 12 ಲಕ್ಷಕ್ಕೆ ಏರಿಸುವಲ್ಲಿ ಹೋರಾಟ ಮಾಡಿದ್ದೇನೆ. ಹೀಗಿದ್ದರೂ ಕೇವಲ ಚಿಲ್ಲರೆ ರಾಜಕಾರಣಕ್ಕಾಗಿ ಅಂಬೇಡ್ಕರ್ ಬಗ್ಗೆ ಜ್ಞಾನವಿಲ್ಲದ ದಲಿತ ಮುಖಂಡರನ್ನು ಮುಂದಿಟ್ಟುಕೊಂಡು ಅಂಬೇಡ್ಕರ್ ಭವನಕ್ಕೆ 20 ಲಕ್ಷ ರೂ.ಗಳನ್ನು ತನ್ನ ಅನುದಾನದಲ್ಲಿ ಕೊಡುತ್ತೇನೆ, ಪುಟ್ಟಣ್ಣಯ್ಯನಿಂದ ಪೂಜೆ ಮಾಡಿಸಬೇಡಿ ಎಂದು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಡ್ಡಿಪಡಿಸವುದರ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಹ್ಯಕರ ಹೇಳಿಕೆ ನೀಡುತ್ತಿರುವುದು ಅಸಭ್ಯವರ್ತನೆ ಎಂದು ಅವರು ಪುಟ್ಟರಾಜು ವಿರುದ್ಧ ಕಿಡಿಕಾರಿದರು.
ಸಂಸದರು ಕೆರೆತೊಣ್ಣೂರು ಆದರ್ಶ ಗ್ರಾಮಕ್ಕೆ ಪೂಜೆ ಮಾಡಿ ಎರಡೂವರೆ ವರ್ಷವಾಯ್ತು, ಕ್ಯಾತನಹಳ್ಳಿ ವಿಶ್ವೇಶ್ವರಯ್ಯ ಪ್ರೌಢಶಾಲೆಗೆ ಶಾಲೆಗೆ 10 ಲಕ್ಷ ಕೊಡ್ತೀನಿ ಎಂದು ಹೇಳಿ 3 ವರ್ಷ ಆಯ್ತು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 40 ಲಕ್ಷ ಕೊಡ್ತೀನಿ ಅಂದ್ರು, ನಯಾಪೈಸೆ ಕೊಡಲಿಲ್ಲ. ರಾಮಮಂದಿರಕ್ಕೆ 15 ಲಕ್ಷ ಕೊಡ್ತೀನಿ ಅನ್ನೋದು, ಹೀಗೆ ಸುಳ್ಳು ಹೇಳಿಕೊಂಡೇ ಕಾಲ ತುಂಬಿಸಿಬಿಡುತ್ತಿದ್ದಾರೆ. ಅಲ್ಲದೇ ನಾನು ಮಾಡುವ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಪಡಿಸಿ ದ್ವೇಷದ ರಾಜಕಾರಣಕ್ಕೆ ಮುಂದಾಗಿರುವುದು ಸರಿಯಲ್ಲ. ಇದನ್ನು ಮತದಾರರು ಗಮನಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಜಿಪಂ ಸದಸ್ಯ ಅಶೋಕ, ಕ್ಷೇತ್ರದಲ್ಲಿ ಕೆಟ್ಟ ಸಂಸ್ಕøತಿಯನ್ನು ಹುಟ್ಟುಹಾಕುತ್ತಿದ್ದರೆ, ಹಿರೇಮರಳಿ ಶಾಲೆ ಸೈಕಲ್ ವಿತರಣೆಗೆ ತನನ್ನು (ಪುಟ್ಟಣ್ಣಯ್ಯ) ಎಸ್‍ಡಿಎಂಸಿ ಸದಸ್ಯರು ಆಹ್ವಾನಿಸಿದರೆ, ಮತ್ತೊಬ್ಬ ಜಿಪಂ ಸದಸ್ಯ ತಿಮ್ಮೇಗೌಡ ಆ ಕುಂಟನನ್ನು ಕರೆಯುವುದಾ ಎಂದು ಅವಹೇಳನ ಮಾಡಿದ್ದಾರೆ. ನಾಗರಿಕ ಸಮಾಜದಲ್ಲಿ ಒಬ್ಬ ಜನಪ್ರತಿನಿಧಿಯಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. `ನಾಲಿಗೆ ಅವರ ಕುಲವನ್ನು ಹೇಳುತ್ತದೆ’ ಎಂದು ಎದುರೇಟು ನೀಡಿದರು.
ತಾಲೂಕಿನ ಅಲ್ಪಹಳ್ಳಿ, ಹೊಸ ಸಾಯಪ್ಪನಹಳ್ಳಿ ಗ್ರಾಮದಲ್ಲಿ ನೀರಿನ ಟ್ಯಾಂಕ್, ಮತ್ತು ಎಪಿಎಂಸಿ ವತಿಯಿಂದ 7 ಕಣಗಳ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುವಾಗ ನನಗೆ ಆಹ್ವಾನ ನೀಡದೇ ಎಂ.ಪಿ.ಗೆ ಮಾತ್ರ ನೀಡಿರುವುದು ಶಿಷ್ಟಾಚಾರ ಉಲ್ಲಂಘಟನೆಯಾಗಿದೆ. ಪಿಎಂಜಿಎಸ್‍ವೈ ಯೋಜನೆಯ ರಸ್ತೆ ಅಭಿವೃದ್ಧಿ ಕಾಮಗಾರಿ ತನ್ನದೆಂದು ಪುಟ್ಟರಾಜು ಸುಳ್ಳು ಹೇಳುತ್ತಾರೆ. ವಾಸ್ತವವಾಗಿ ವಾಹನದ ಒತ್ತಡ ಮತ್ತು ಸಂಖ್ಯೆ ಆಧಾರದ ಮೇಲೆ ಹೆದ್ದಾರಿ ಅಭಿವೃದ್ಧಿ ನಿಗಮ ಈ ಕಾಮಗಾರಿ ನಡೆಸಿದೆ ಎಂದು ಸ್ಪಷ್ಟಪಡಿಸಿದರು.
ಸಂಸದ ಸಿ.ಎಸ್.ಪುಟ್ಟರಾಜು ಮೊದಲು ರಾಷ್ಟ್ರೀಕೃತ ಬ್ಯಾಂಕುಗಳ ಸಭೆ ಕರೆದು ಜಿಲ್ಲೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ, ಸಾಲದ ನೀತಿ ಬಗ್ಗೆ ಚರ್ಚಿಸಿ ರೈತರಿಗೆ ಅನುಕೂಲ ಮಾಡಲಿ. ಅದನ್ನು ಬಿಟ್ಟು ದ್ವೇಷದ ರಾಜಕಾರಣ ಮಾಡುವುದು ಬೇಡ ಎಂದು ಅವರು ಸಲಹೆ ಮಾಡಿದರು.
ದೇಶದಲ್ಲಿ 148 ರೈತ ಸಂಘಟನೆಗಳು ಒಂದಾಗಿ, ಮುಂದಿನ ಚುನಾವಣಾ ರಾಜಕಾರಣದಲ್ಲಿ ಭಾಗವಹಿಸುತ್ತಿವೆ ಎಂದ ಪುಟ್ಟಣ್ಣಯ್ಯ, ಸರಕಾರ ಕಾವೇರಿ ಕಣಿವೆ ಜಲಾಶಯಗಳಿಂದ ಎರಡು ಕಟ್ಟು ನೀರುಹರಿಸಿದರೆ ಅಂತರ್ಜಲ ವೃದ್ಧಿ, ತೆಂಗು, ಅಡಿಕೆ, ರಾಗಿ, ಇತರೆ ಕಾಳುಗಳ ಬೆಳೆಗೆಗಾಗಿ ಸರಕಾರ ಕಾವೇರಿ ಕಣಿವೆ ಜಲಾಶಯಗಳಿಂದ ಎರಡು ಕಟ್ಟು ನೀರುಬಿಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಹಿರೇಮರಳಿ ಕೃಷ್ಣಮೂರ್ತಿ, ಹೊಸಕೋಟೆ ವಿಜಯಕುಮಾರ ಹಾಗು ಹೊಸಹಳ್ಳಿ ಜಯರಾಮು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







