ಬೈಕ್- ಕಾರು ಢಿಕ್ಕಿ: ಪಿಡಿಒ ಸಹಿತ ಇಬ್ಬರಿಗೆ ಗಾಯ

ಕುಂದಾಪುರ, ಆ.5: ತಲ್ಲೂರು ರಾಜಾಡಿ ಸೇತುವೆ ಬಳಿ ಇಂದು ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಹಿತ ಇಬ್ಬರು ಗಂಭೀರವಾಗಿ ಗಾಯಗೊಂಡ ಬಗ್ಗೆ ವರದಿ ಯಾಗಿದೆ.
ಗಾಯಗೊಂಡವರನ್ನು ಬೈಕ್ ಸವಾರ ಕೂಡ್ಲು ಕನ್ಯಾನ ನಿವಾಸಿ ಶೇಖರ ಪೂಜಾರಿ (45) ಹಾಗೂ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶಿರೂರು ನಿವಾಸಿ ದಿವಾಕರ ಶ್ಯಾನುಭಾಗ (52) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಇವರಿಬ್ಬರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಇಂದು ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಊಟದ ವಿಶ್ರಾಂತಿಗೆ ತಲ್ಲೂರಿಗೆ ತೆರಳಿದ್ದರು. ಬಳಿಕ ಮರಳಿ ಹೆಮ್ಮಾಡಿಗೆ ಹೋಗುವಾಗ ಗಂಗೊಳ್ಳಿಯಿಂದ ಬೀಜಾಡಿ ಕಡೆ ಬರುತ್ತಿದ್ದ ಪರಮೇಶ್ವರ ಎಂಬವರ ಹೊಸ ಎರ್ಟಿಗಾ ಕಾರು ಓವರ್‌ಟೇಕ್ ಮಾಡುವ ಭರದಲ್ಲಿ ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಇಬ್ಬರು ಬೈಕು ಸವಾರರು ಕಾರಿನ ಮೇಲ್ಬಾಗಕ್ಕೆ ಅಪ್ಪಳಿಸಿ ಬಳಿಕ ರಸ್ತೆ ಬದಿಯ ಸುಮಾರು 70 ಅಡಿ ಆಳದ ಕಂದಕಕ್ಕೆ ಎಸೆಯಲ್ಪಟ್ಟರು. ಇದರಿಂದ ಇಬ್ಬರ ಕಾಲು ಹಾಗೂ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿವಾಕರ ಶ್ಯಾನುಭಾಗ ಕಳೆದ ಐದು ವರ್ಷಗಳಿಂದ ಹಟ್ಟಿಯಂಗಡಿ ಪಂಚಾಯತ್ ಪಿಡಿಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







