ಸಮಾನ ಶಿಕ್ಷಣದಿಂದ ಮಾಧ್ಯಮ ಗೊಂದಲ ನಿವಾರಣೆ: ಕಲ್ಕೂರ

ಉಡುಪಿ, ಆ.5: ಕೇಂದ್ರ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕು. ಪ್ರಾಥಮಿಕ ಶಿಕ್ಷಣವು ಆಯಾ ರಾಜ್ಯಭಾಷೆಯಲ್ಲಿಯೇ ಆಗಬೇಕು. ಎಲ್ಲರು ಒಂದೇ ಸೂರಿನಡಿ ಸಮಾನ ಶಿಕ್ಷಣ ಕಲಿಯುವ ವ್ಯವಸ್ಥೆ ಬಂದಾಗ ಮಾಧ್ಯಮಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಗೊಂದಲ ನಿವಾರಣೆಯಾಗುತ್ತದೆ ಕನ್ನಡ ಸಾಹಿತ್ಯ ಪರಿಷತ್‌ನ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಭಿಪ್ರಾಯ ಪಟ್ಟಿದ್ದಾರೆ.
ಉಡುಪಿ ಬಳಕೆದಾರರ ವೇದಿಕೆಯ ವತಿಯಿಂದ ‘ಕನ್ನಡ ಮಾಧ್ಯಮ- ಗ್ರಾಹಕರ ಗೊಂದಲಕ್ಕೆಂದು ಮಂಗಳ’ ವಿಷಯದ ಕುರಿತು ಶನಿವಾರ ವೇದಿಕೆ ಸಭಾಂಗಣದಲ್ಲಿ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ‘ಕನ್ನಡ ಮಾಧ್ಯಮ- ಏಕೀ ಗೊಂದಲ’ ವಿಷಯದ ಕುರಿತು ಮಾತನಾಡುತಿದ್ದರು.
ಶಿಕ್ಷಣ ಕಲಿಕೆಯಲ್ಲಿ ಶ್ರೀಮಂತರು ಒಂದು ಕಡೆ, ಬಡವರು ಒಂದು ಕಡೆ ಎಂಬ ಧ್ರುವೀಣಕರಣದಿಂದ ಕೀಳರಿಮೆ ಹಾಗೂ ಮೇಲರಿಮೆ ಎಂಬುದು ಸೃಷ್ಠಿ ಯಾಗಿದೆ. ಈ ಎಲ್ಲ ಗೊಂದಲದಿಂದ ಹೊರಬರಬೇಕಾದರೆ ಕಾನೂನಿನ ನೂನ್ಯತೆಯನ್ನು ಸರಿಪಡಿಸಿ ಮಾತೃಭಾಷೆಯಲ್ಲಿಯೇ ಶಿಕ್ಷಣ ಎಂಬ ನೀತಿಯನ್ನು ಜಾರಿಗೆ ತರಬೇಕು ಎಂದರು.
ಶಿಕ್ಷಣ ಎಂಬುದು ಮನುಷ್ಯನಿಗೆ ಜ್ಞಾನದೊಂದಿಗೆ ಬಹುಮುಖಿ ಸಂಸ್ಕೃತಿ ಯನ್ನು ಕಲಿಸುತ್ತದೆ. ಆದರೆ ಇಂದು ಆ ಶೈಕ್ಷಣಿಕ ವ್ಯವಸ್ಥೆಯು ವ್ಯಾಪಾರೀಕರಣ ಆಗುತ್ತಿದೆ. ವ್ಯವಸ್ಥೆಗಳ ನಿರ್ಲಕ್ಷದಿಂದಾಗಿ ಸರಕಾರಿ ಶಾಲೆಗಳಿಗೆ ಈ ದುಸ್ಥಿತಿ ಬಂದಿದೆ. ಪರಿಪೂರ್ಣ ಶಕ್ತಿಯನ್ನು ಸರಕಾರಿ ಶಾಲೆಗಳಿಗೆ ನೀಡುತ್ತಿಲ್ಲ ಎಂದು ಅವರು ದೂರಿದರು.
ಉಡುಪಿ ಸ್ಪಂದನ ವಾಹಿನಿಯ ರಾಜೇಂದ್ರ ಭಟ್ ‘ಕನ್ನಡ ಮಾಧ್ಯಮ ಅನುಷ್ಠಾನದಲ್ಲಿ ಮಾಧ್ಯಮಗಳ ಪಾತ್ರ’ ಕುರಿತು ಮಾತನಾಡಿ, ಸರಕಾರದ ಇಚ್ಛಾಶಕ್ತಿಯ ಕೊರತೆ ಮತ್ತು ತಪ್ಪು ನೀತಿಗಳು ಹಾಗೂ ಪ್ರತಿಷ್ಠೆಯ ಹಿಂದೆ ಹೋಗುತ್ತಿರುವ ಪೋಷಕರ ಮನೋಭಾವದಿಂದಾಗಿ ಇಂದು ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ ಎಂದು ಆರೋಪಿಸಿದರು.
ಸಾಹಿತ್ಯಿಕವಾಗಿ ಬೆಳೆದಿರುವ ಕನ್ನಡ ಭಾಷೆಯು ಇಂದು ಅನ್ನದ ಭಾಷೆಯಾಗಿ ಉಳಿಯದ ಕಾರಣ ಕನ್ನಡ ಶಾಲೆಗಳು ಈ ಸ್ಥಿತಿಗೆ ಬಂದಿವೆ. 1983ರ ಸಿಇಟಿ ಕಾನೂನಿಂದಾಗಿ ಪೋಷಕರಲ್ಲಿ ಆಂಗ್ಲ ಮಾಧ್ಯಮದ ವ್ಯಾಮೋಹ ಬೆಳೆಯಿತು., ಅಲ್ಲದೆ ಜಾಗತೀಕರಣದ ಪರಿಣಾಮವಾಗಿ ಕನ್ನಡ ಭಾಷೆಗೆ ಕುತ್ತು ಬರಲು ಆರಂಭವಾಯಿತು ಎಂದರು.
ಕನ್ನಡ ಶಾಲೆಗಳು ಉಳಿಯಬೇಕಾದರೆ ಒಂದರಿಂದ 10ನೆ ತರಗತಿವರೆಗೆ ಪ್ರಥಮ ಭಾಷೆಯಾಗಿ ಕನ್ನಡವನ್ನು ಕಲಿಸಬೇಕು. ಒಂದನೆ ತರಗತಿಯಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್‌ನ್ನು ಸಂವಹನ ಭಾಷೆಯಾಗಿ ಕಲಿಸಬೇಕು. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಕ್ರಮ ತೆಗೆದುಕೊಳ್ಳಬೇಕು. ಕಂಗ್ಲಿಷ್ ಶಾಲೆಗಳನ್ನು ನಿಯಂತ್ರಿಸಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಶೇ.50 ರಷ್ಟು ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಸಮನ್ವಯಕಾರರಾಗಿ ಶಿಕ್ಷಣ ಇಲಾಖೆಯ ಬಿಇಓ ಅಶೋಕ್ ಕಾಮತ್ ಉಪಸ್ಥಿತರಿದ್ದರು. ವೇದಿಕೆಯ ಸಂಚಾಲಕ ಕೆ.ದಾಮೋದರ್ ಐತಾಳ್ ಸ್ವಾಗತಿಸಿ ದರು. ವಿಶ್ವಸ್ಥ ಎಚ್.ಶಾಂತರಾಜ ಐತಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲ್ತಾಫ್ ಅಹಮ್ಮದ್ ವಂದಿಸಿದರು. ಲಕ್ಷ್ಮಿ ಬಾಯಿ ಕಾರ್ಯಕ್ರಮ ನಿರೂ ಪಿಸಿದರು.





