ಯೆನೆಪೊಯ ಫೌಂಡೇಶನ್ ಅಕಾಡಮಿಕ್ ಎಕ್ಸಲೆನ್ಸಿ ಅವಾರ್ಡ್: ಅರ್ಜಿ ಆಹ್ವಾನ

ಮಂಗಳುರು, ಆ.5: ಯೆನೆಪೊಯ ಮೊಯ್ದಿನ್ ಕುಂಞಿ ಮೆಮೋರಿಯಲ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಘಟಕವಾದ ಯೆನೆಪೊಯ ಫೌಂಡೇಶನ್ ವತಿಯಿಂದ ಯೆನೆಪೊಯ ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ಪ್ರತೀವರ್ಷ ನೀಡುವ ‘ಯೆನೆಪೊಯ ಫೌಂಡೇಶನ್ ಅಕಾಡಮಿಕ್ ಎಕ್ಸಲೆನ್ಸಿ ಅವಾರ್ಡ್- 2017’ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
2016-17ನೇ ಸಾಲಿನ ಎಸೆಸೆಲ್ಸಿ, ಪಿಯುಸಿ ಹಾಗೂ ಸ್ನಾತಕ ಪದವಿ ಮಟ್ಟದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿರುವ ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಹೀಗೆ ನೀಡುವ ಪ್ರಶಸ್ತಿಯಲ್ಲಿ ಕೆಲವು ಎಲ್ಲಾ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಲಭ್ಯವಿದ್ದರೆ ಇನ್ನು ಕೆಲವು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ 90 ಶೇ. ಮತ್ತು ಅದಕ್ಕಿಂತ ಹೆಚ್ಚು ಅಂಕಗಳು, ಬಿಕಾಂ, ಬಿಎಸ್ಸಿ, ಬಿಸಿಎ, ಬಿಬಿಎಂ ಮೊದಲಾದ ಸ್ನಾತಕ ಪದವಿ ಮಟ್ಟದಲ್ಲಿ 80 ಶೇ. ಹಾಗೂ ಬಿಎ, ಬಿಎಡ್, ಅಪ್ಸಲ್-ಉಲಮಾ ಪದವಿ ಮಟ್ಟದಲ್ಲಿ 70 ಶೇ. ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳು ಈ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿಗಳನ್ನು ಖಾಲಿ ಹಾಳೆಯಲ್ಲಿ ಬರೆದು ಒಂದು ಭಾವಚಿತ್ರ, ಅರ್ಹತಾ ಪರೀಕ್ಷೆಯ ದೃಢೀಕೃತ ಅಂಕಪಟ್ಟಿ, ಕಲಿತ ಭಾಷಾ ಮಾಧ್ಯಮ, ದೂರವಾಣಿ ಸಂಖ್ಯೆ ಸಹಿತ ವಿದ್ಯಾರ್ಥಿಯ ಸಂಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಯೊಂದಿಗೆ ಕಲಿತ ವಿದ್ಯಾಸಂಸ್ಥೆಯ ವಿಳಾಸವನ್ನು ಕಳುಹಿಸಿಕೊಡಬೇಕು.
ಶಿಕ್ಷಣ ಸಂಸ್ಥೆಗಳಿಗೂ ಪುರಸ್ಕಾರ: ಅವಿಭಜಿತ ದ.ಕ. ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಎಸೆಸೆಲ್ಸಿ ಪಿಯುಸಿ ಹಾಗೂ ಸ್ನಾತಕ ಪದವಿ ಮಟ್ಟದಲ್ಲಿ 100 ಶೇ. ಫಲಿತಾಂಶ ದಾಖಲಿಸಿರುವ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳಿಂದಲೂ ನಗದು ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅಂತಹ ಸಂಸ್ಥೆಗಳಲ್ಲಿ ಎಸೆಸೆಲ್ಸಿ ಮಟ್ಟದಲ್ಲಿ ಕನಿಷ್ಠ 50 ವಿದ್ಯಾರ್ಥಿಗಳಿರಬೇಕು. ಹಾಗೆಯೇ ಪಿಯುಸಿ ಹಾಗೂ ಸ್ನಾತಕ ಪದವಿ ಮಟ್ಟದಲ್ಲಿ ಪ್ರತೀ ವಿಷಯ ನಿಕಾಯದಲ್ಲಿ 50 ವಿದ್ಯಾರ್ಥಿಗಳನ್ನು ಹೊಂದಿರಬೇಕು. ಈ ಅರ್ಹತೆ ಹೊಂದಿರುವ ವಿದ್ಯಾಸಂಸ್ಥೆಗಳು ಪ್ರಾಂಶುಪಾಲರಿಂದ ದೃಢೀಕೃತ ಶೈಕ್ಷಣಿಕ ಫಲಿತಾಂಶದ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿಗಳನ್ನು ಕಾರ್ಯದರ್ಶಿ, ಶೈಕ್ಷಣಿಕ ಉತ್ಕೃಷ್ಟತಾ ಪ್ರಶಸ್ತಿ ಸಮಿತಿ, ಯೆನೆಪೊಯ ವಿಶ್ವವಿದ್ಯಾನಿಲಯ, ವಿಶ್ವವಿದ್ಯಾನಿಲಯ ರಸ್ತೆ, ದೇರಳಕಟ್ಟೆ-ಮಂಗಳೂರು -575018 ಈ ವಿಳಾಸಕ್ಕೆ ಆ.15ರೊಳಗೆ ಕವರಿನ ಮೇಲೆ ‘ಶೈಕ್ಷಣಿಕ ಉತ್ಕೃಷ್ಟತಾ ಪ್ರಶಸ್ತಿ-2017’ ವಿಭಾಗಕ್ಕೆ ಅರ್ಜಿ ಎಂದು ನಮೂದಿಸಿ ಕಳುಹಿಸುವಂತೆ ಪ್ರಕಟನೆ ತಿಳಿಸಿದೆ.







