ಶ್ರೀಯುತ ಜೇಟ್ಲಿಯವರೇ... ಎಲ್ಲಿದೆ ಉದ್ಯೋಗ..?
ವಿತ್ತಸಚಿವರಿಗೆ ಕಾಂಗ್ರೆಸ್ ಬಹಿರಂಗ ಪತ್ರ

ಹೊಸದಿಲ್ಲಿ, ಆ.5: ಕೇಂದ್ರ ಸರಕಾರದ ನೋಟು ಅಮಾನ್ಯೀಕರಣ ನಿರ್ಧಾರವು ಬಡಜನತೆಯ ವಿರುದ್ಧದ ‘ಸರ್ಜಿಕಲ್ ಸ್ಟ್ರೈಕ್’ ಎಂದು ಬಣ್ಣಿಸಿರುವ ಕಾಂಗ್ರೆಸ್, ಈ ಪ್ರಕ್ರಿಯೆ ದೇಶದಲ್ಲಿ ಭಾರೀ ಉದ್ಯೋಗ ನಷ್ಟಕ್ಕೆ ಕಾರಣವಾಗಿದೆ ಎಂದು ಟೀಕಿಸಿದೆ. ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಕಾಂಗ್ರೆಸ್ ಬರೆದಿರುವ ಬಹಿರಂಗ ಪತ್ರದ ಸಾರಾಂಶ ಇಲ್ಲಿದೆ.
ಆತ್ಮೀಯರಾದ ಶ್ರೀಯುತ ಜೇಟ್ಲಿಯವರೆ,
ಸರಕಾರ ನಿರ್ಮಿಸಿದ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯ ಮುಖ್ಯಸ್ಥಾನದಲ್ಲಿ ಕುಳಿತು ಹೇಗನ್ನಿಸುತ್ತಿದೆ? ನೀವು ವಿತ್ತ ಸಚಿವರಾದ ಒಂದೂವರೆ ವರ್ಷದ ಅವಧಿಯಲ್ಲಿ 1.6 ಕೋಟಿ ಭಾರತೀಯರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ‘ಲೇಬರ್ ಬ್ಯೂರೊ ಡಾಟ’ದ ವರದಿಯಲ್ಲಿ ತಿಳಿಸಲಾಗಿದೆ.
ನಿಮ್ಮ ಅಮಾನ್ಯೀಕರಣ ನಿರ್ಧಾರದ ನೇರ (ಪ್ರತ್ಯಕ್ಷ) ಪರಿಣಾಮದಿಂದ 15 ಲಕ್ಷ ಉದ್ಯೋಗ ನಷ್ಟವಾಗಿದೆ ಎಂದು ಸಿಎಂಐಇ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ನಿಮ್ಮ ಅಘೋಷಿತ ಆರ್ಥಿಕ ತುರ್ತುಪರಿಸ್ಥಿತಿ ಬಡಜನರ ವಿರುದ್ಧ ನಡೆಸಿದ ಸರ್ಜಿಕಲ್ ದಾಳಿಯಾಗಿದೆ.
ದೇಶದ ಉದ್ಯೋಗ ಪರಿಸ್ಥಿತಿಯ ಕುರಿತು ನಿಮ್ಮ ಸರಕಾರ ಸಮೀಕ್ಷೆಗಳನ್ನು ನಡೆಸುವ ಪ್ರಕ್ರಿಯೆ ಸ್ಥಗಿತಗೊಳಿಸಿರುವುದರಲ್ಲಿ ಅಚ್ಚರಿ ಏನಿಲ್ಲ. ನೀತಿ ಆಯೋಗವು ಬಡತನವನ್ನು ಪತ್ತೆಹಚ್ಚುವುದು ತನ್ನ ಕಾರ್ಯವಾಗಿದೆ ಎಂದು ಯಾಕೆ ಪರಿಗಣಿಸಿಲ್ಲ. ಸಮಸ್ಯೆಯನ್ನು ಅಂದಾಜಿಸಲು ಆಗದಿದ್ದರೆ ಸಮಸ್ಯೆಯೇ ಇಲ್ಲ ಎಂದು ತಿಳಿದುಕೊಳ್ಳುವುದು- ಇದು ಆರ್ಥಿಕತೆಯ ಕುರಿತು ನಿಮ್ಮ ಉಷ್ಟ್ರಪಕ್ಷಿ ನೀತಿ (ಕುರುಡು ನಂಬಿಕೆ)ಯಾಗಿದೆ. ಅಲ್ಲವೇ?
20 ತಿಂಗಳಿಗೂ ಅಧಿಕ ಸಮಯ ರಫ್ತು ಪ್ರಕ್ರಿಯೆ ಸ್ಥಗಿತಗೊಂಡಾಗ, ಅಧಿಕಗೊಳ್ಳುತ್ತಿದ್ದ ಬಡ್ಡಿದರವು ಹೂಡಿಕೆಯನ್ನು ಆಕರ್ಷಿಸಲು ವಿಫಲವಾದಾಗ ಬಹುಷಃ ನಮ್ಮಲ್ಲಿ ಉದ್ಯೋಗ ನಷ್ಟವಾಗಿದೆ. ಕೃಷಿಯೇತರ ಆರ್ಥಿಕತೆಯ ಮೂರನೇ ಎರಡು ಭಾಗದಷ್ಟಿರುವ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಾಗ ಬಹುಷಃ ನಮ್ಮ ಉದ್ಯೋಗ ನಷ್ಟವಾಗಿದೆ.
ಕೃಷಿ ವಲಯದಲ್ಲಿ ಉದ್ಯೋಗ ನಷ್ಟವಾಗಲು ಬಹುಷಃ ದೇವರೇ ಕಾರಣವಾಗಿರಬಹುದು. ಸತತ ಎರಡು ವರ್ಷ ಇದ್ದ ಬರಗಾಲದ ಪರಿಸ್ಥಿತಿಯನ್ನು ನಾವು ಅಲ್ಲಗಳೆಯುವಂತಿಲ್ಲ. ಆದರೆ ಇದಕ್ಕೆ ಜೊತೆಯಾಗಿ , ರೈತರ ಸಾಲ ಮನ್ನಾ ಮಾಡಲು ನಿಮ್ಮ ಸರಕಾರ ನಿರಾಕರಿಸಿರುವುದೂ ಇದಕ್ಕೆ ಕಾರಣವಾಗಿದೆ. ನಿಮ್ಮ ಸ್ನೇಹಿತರು ಪಡೆದಿರುವ ಸಾಲವನ್ನು ಎನ್‌ಪಿಎ(ಅನುತ್ಪಾದಕ ಆಸ್ತಿ) ಎಂಬ ಹೆಸರಿನಲ್ಲಿ ಮನ್ನಾ ಮಾಡಿರುವ ಕಾರಣ ರೈತರಿಗೆ ನೆರವಾಗಲು ಸರಕಾರದ ಬಳಿ ಬಹುಷಃ ಹಣ ಇರಲಿಲ್ಲ. ಅಥವಾ ಕೃಷಿ ಕ್ಷೇತ್ರದಲ್ಲಿ ಸರಕಾರದ ಹೂಡಿಕೆಯನ್ನು ಗಮನಾರ್ಹವಾಗಿ ಕಡಿತಗೊಳಿಸಲು ನೀವು ನಿರ್ಧರಿಸಿರುವುದು ಇದಕ್ಕೆ ಕಾರಣವಾಗಿರಬಹುದು.
ಸಾಂಪ್ರದಾಯಿಕವಲ್ಲದ ಕ್ಷೇತ್ರವನ್ನು ನಿಮ್ಮ ಸರಕಾರದ ಅಮಾನ್ಯೀಕರಣ ಮತ್ತು ಜಿಎಸ್‌ಟಿ ನಿರ್ಧಾರ ಬಲಿತೆಗೆದುಕೊಂಡಾಗ ಹಲವು ಯುವಕರು ಅನಿವಾರ್ಯವಾಗಿ ತಮ್ಮ ಗ್ರಾಮಕ್ಕೆ ತೆರಳಿ, ಅದುವರೆಗೆ ಮಹಿಳೆಯರು ನಿಭಾಯಿಸುತ್ತಿದ್ದ ನೌಕರಿಯನ್ನು ಕೈವಶ ಪಡೆದುಕೊಂಡರು. ಇದರಿಂದ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆಯಾಗಿದೆ. ಬಹುಷಃ ನಮ್ಮ ಉದ್ಯೋಗ ನಷ್ಟವಾಗಲು ಇದೂ ಒಂದು ಕಾರಣವಾಗಿರಬಹುದು.
ಇದೀಗ ರಾಷ್ಟ್ರದಾದ್ಯಂತ ಕನಿಷ್ಟ ವೇತನ ನಿಯಮ ಜಾರಿಗೊಳಿಸಿದ ತಕ್ಷಣ ಎಲ್ಲಾ ಸಮಸ್ಯೆಗಳೂ ಪರಿಹಾರವಾಗಿಬಿಟ್ಟವು ಎಂದು ನೀವು ನಂಬಿದ್ದೀರಿ. ಆದರೆ, ಈ ನಿರ್ಧಾರದಿಂದ ಉದ್ಯಮದ ವೆಚ್ಚ ಅಧಿಕಗೊಳ್ಳುವ ಕಾರಣ ಇದು ಮತ್ತಷ್ಟು ಉದ್ಯೋಗ ಕಡಿತಕ್ಕೆ ಕಾರಣವಾಗಬಹುದು. ಅಲ್ಲದೆ ಉದ್ಯೋಗಿಗಳು ಕಡಿಮೆ ವೇತನ ನೀಡುವ ಬಡರಾಜ್ಯಗಳಿಂದ ಆರ್ಥಿಕವಾಗಿ ಬಲಿಷ್ಠರಾಗಿರುವ ರಾಜ್ಯದತ್ತ ತೆರಳುವ ಕಾರಣ ಪ್ರಾದೇಶಿಕ ಅಸಮಾನತೆಗೆ ಕಾರಣವಾಗಬಹುದು.
ಕಳಕಳಿಯೊಂದಿಗೆ-ಭಾರತದ 54.4 ಕೋಟಿ ನಿರುದ್ಯೋಗಿಗಳು.







