1959ರಲ್ಲಿ ಭಾರತದ ವಿರುದ್ಧ ಗಡಿಘರ್ಷಣೆ: ಮಾವೋರನ್ನು ತರಾಟೆಗೆ ತೆಗೆದುಕೊಂಡಿದ್ದ ಕ್ರುಶ್ಚೇವ್

ಮಾಸ್ಕೊ,ಆ.5: 1959ರಲ್ಲಿ ಭಾರತದ ಜೊತೆ ನಡೆದ ಗಡಿಘರ್ಷಣೆ ಹಾಗೂ ಆನಂತರ ಟಿಬೆಟ್‌ನಿಂದ ಬೌದ್ಧಧರ್ಮಗುರು ದಲಾಯಿಲಾಮಾ ಅವರ ಪಲಾಯನ ಕ್ಕಾಗಿ ಆಗಿನ ಸೋವಿಯತ್ ನಾಯಕ ನಿಕಿತಾ ಕುರುಶ್ಚೇವ್ ಚೀನವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಆಗಿನ ಭಾರತದ ಪ್ರಧಾನಿ ನೆಹರೂ ಗಾಂಧಿ ಅವರದು ಯಾವುದೇ ತಪ್ಪಿಲ್ಲವೆಂದು ಹೇಳಿದ್ದರೆಂದು ಮಾಧ್ಯಮವರದಿಯೊಂದು ಶನಿವಾರ ತಿಳಿಸಿದೆ.
ಟಿಬೆಟ್‌ನಲ್ಲಿ ಅರಾಜಕ ಪರಿಸ್ಥಿತಿ ಹಾಗೂ ಭಾರತದ ಜೊತೆಗಿನ ಉದ್ವಿಗ್ನತೆಗಾಗಿ ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷವೇ ಕಾರಣವೆಂದು ಕ್ರುಶ್ಚೇವ್ ಅವರು ಆಗಿನ ಚೀನಾ ಪ್ರಧಾನಿ ಮಾವೊ ತ್ಸೆ ತುಂಗ್ ಅವರಿಗೆ ಕಟುವಾಗಿ ಹೇಳಿದ್ದರೆಂದು ಹಾಂಕಾಂಗ್‌ನ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಈ ಇಬ್ಬರು ನಾಯಕರ ಸಂಭಾಷಣೆಯ ವಿವರಗಳನ್ನು ಅದು ಇಂದಿನ ಸಂಚಿಕೆಯಲ್ಲಿ ಪ್ರಕಟಿಸಿದೆ.
‘‘ಹಲವು ವರ್ಷಗಳಿಂದ ನೀವು ಭಾರತದ ಜೊತೆ ಉತ್ತಮ ಬಾಂಧವ್ಯವನ್ನು ಇರಿಸಿಕೊಂಡಿರುವಿರಿ. ಈಗ ಹಠಾತ್ತನೆ, ನಡೆದಿರುವ ಕೆಟ್ಟ ಘಟನೆಯಿಂದಾಗಿ ನೆಹರೂ ತುಂಬಾ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುವಂತಾಗಿದೆ’’ ಎಂದು ಕ್ರುಶ್ಚೇವ್, ಬೀಜಿಂಗ್‌ನಲ್ಲಿ ಮಾವೊ ಅವರನ್ನು ಭೇಟಿಯಾದ ವೇಳೆ ತಿಳಿಸಿದ್ದರು.
ನೀವು ನನಗೆ ಮಾತನಾಡಲು ಬಿಟ್ಟಲ್ಲಿ ಅತಿಥಿಯೊಬ್ಬ ಹೇಳಬಾರದ್ದನ್ನು ಹೇಳುತ್ತೇನೆ. ನಿಮ್ಮ ಪ್ರಮಾದದಿಂದಾಗಿಯೇ ಟಿಬೆಟ್‌ನಲ್ಲಿನ ಅಹಿತಕರ ಘಟನೆಗಳು ನಡೆಯುತ್ತಿವೆ. ನಿಮ್ಮ ಗುಪ್ತಚರ ಏಜೆನ್ಸಿಗಳು ಟಿಬೆಟ್‌ನಲ್ಲಿರುವದರಿಂದ ನಿಮಗೆ ದಲಾಯಿಲಾಮಾ ಅವರ ಉದ್ದೇಶ ಹಾಗೂ ಯೋಜನೆಗಳ ಬಗ್ಗೆ ಮೊದಲೇ ತಿಳಿದಿರಬೇಕಿತ್ತು’’ ಎಂದು ಕ್ರುಶ್ಚೇವ್ ಮಾವೊ ಅವರಿಗೆ ಹೇಳಿರುವುದಗಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯಲ್ಲಿ ತಿಳಿಸಿದೆ.
ಇದಕ್ಕೆ ಪ್ರತ್ಯುತ್ತರ ನೀಡಿದ ಮಾವೊ ಅವರು ‘‘ನೆಹರೂ ಕೂಡಾ ಟಿಬೆಟ್‌ನಲ್ಲಿನ ವಿದ್ಯಮಾನಗಳಿಗೆ ನಮ್ಮ (ಚೀನಾ) ಪ್ರಮಾದವೇ ಕಾರಣವೆಂದು ಹೇಳುತ್ತಿದ್ದಾರೆ. ಇದರ ಜೊತೆಗೆ ರಶ್ಯ ಕೂಡಾ ಭಾರತ-ಚೀನಾ ಸಂಘರ್ಷಕ್ಕೆ ಸಂಬಂಧಿಸಿ ಭಾರತವನ್ನು ಬೆಂಬಲಿಸಿಸುವ ಘೋಣೆಯನ್ನು ಹೊರಡಿಸಿತ್ತು ್ಫ್ಫಎಂದಿದ್ದರು. ರಶ್ಯನ್ನರು ಸಮಯ ಸಾಧಕರೆಂಬ ಚೀನಾದ ಆರೋಪದಿಂದ ತಾವು ರೋಷಗೊಂಡಿರುವುದಾಗಿಯೂ ಈ ಸಂದರ್ಭದಲ್ಲಿ ಕ್ರುಶ್ಚೇವ್ ತಿಳಿಸಿದ್ದರೆಂದು ಪತ್ರಿಕೆ ವರದಿ ಮಾಡಿದೆ.
ಈ ಭೇಟಿಯ ಬಳಿಕ ಚೀನಾ ಹಾಗೂ ಸೋವಿಯತ್ ಒಕ್ಕೂಟದ ನಡುವಿನ ಬಾಂಧವ್ಯ ಬಿಗಡಾಯಿಸಿತ್ತು. ಆನಂತರ ಬೀಜಿಂಗ್, ಅಮೆರಿಕದೆಡೆಗೆ ತನ್ನ ಸ್ನೇಹವನ್ನು ಬಲಪಡಿಸಲು ಮುಂದಾಯಿತೆಂದು ವರದಿ ಹೇಳಿದೆ.







