ಉಡುಪಿ ಜಿಪಂ ಸಿಇಒ ಆಗಿ ಶಿವಾನಂದ ಕಾಪಸಿ

ಉಡುಪಿ, ಆ. 5: ಉಡುಪಿ ಜಿಲ್ಲಾ ಪಂಚಾಯತ್‌ನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಈಗ ಹುಬ್ಬಳ್ಳಿಯಲ್ಲಿ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್‌ಸಿ)ಯ ಹುಬ್ಬಳ್ಳಿ ಪ್ರಾದೇಶಿಕ ಕಚೇರಿಯಲ್ಲಿ (ಎನ್‌ಕೆಯುಎಸ್‌ಐಪಿ) ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಹಿರಿಯ ಕೆಎಎಸ್ ಅಧಿಕಾರಿ ಶಿವಾನಂದ ಕಾಪಸಿ ಅವರನ್ನು ನೇಮಿಕಿ ಸರಕಾರ ಆದೇಶ ಹೊರಡಿಸಿದೆ.
ಕಳೆದ ಫೆ. 21ರಂದು ಉಡುಪಿಯ ಜಿಲ್ಲಾಧಿಕಾರಿಯಾಗಿದ್ದ ಟಿ. ವೆಂಕಟೇಶ್ ಅವರನ್ನು ವರ್ಗಾಯಿಸಿ, ಅವರ ಸ್ಥಾನಕ್ಕೆ ಆಗ ಉಡುಪಿ ಸಿಇಒ ಆಗಿದ್ದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರನ್ನು ಜಿಲ್ಲಾಧಿಕಾರಿಯಾಗಿ ಸರಕಾರ ನೇಮಿಸಿದ ಬಳಿಕ ಜಿಲ್ಲೆಯಲ್ಲಿ ಸಿಇಒ ಹುದ್ದೆ ಖಾಲಿ ಉಳಿದಿತ್ತು. ಈವರೆಗೆ ಪ್ರಿಯಾಂಕ ಅವರೇ ಸಿಇಒರ ಹೆಚ್ಚುವರಿ ಜವಾಬ್ದಾರಿ ನಿಭಾಯಿಸುತಿದ್ದರು.
ಇದೀಗ ಸುಮಾರು ಆರು ತಿಂಗಳ ಬಳಿಕ ಉಡುಪಿಗೆ ಖಾಯಂ ಸಿಇಒ ನೇಮಕಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ಮೂಲದ ಶಿವಾನಂದ ಕಾಪಸಿ (50), ಧಾರವಾಡದ ಯುಎಎಸ್‌ನಲ್ಲಿ ಕೃಷಿಯಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. ಅವರು ಆ. 9ರಂದು ಉಡುಪಿ ಸಿಇಒ ಆಗಿ ಆಧಿಕಾರ ಸ್ವೀಕರಿಸಲಿದ್ದಾರೆ ಎಂದು ಜಿಪಂ ಮೂಲಗಳು ತಿಳಿಸಿವೆ.





