ಮಹಿಳೆಯರಿಗೆ ಈಗಲೂ ಸ್ಯಾನಿಟರಿ ಪ್ಯಾಡ್ಸ್ ನಿಷಿದ್ಧ ವಸ್ತು: ಮ್ಯಾಗ್ಸಸ್ಸೆ ಪ್ರಶಸ್ತಿ ವಿಜೇತ ಅಂಶು ಗುಪ್ತ

ಮಣಿಪಾಲ, ಆ.5: ಸಮಾಜದಲ್ಲಿ ಮಹಿಳೆಯರಿಗೆ ಈಗಲೂ ಸ್ಯಾನಿಟರಿ ಪ್ಯಾಡ್ಸ್ ನಿಷಿದ್ಧ ವಸ್ತುವಾಗಿದ್ದು, ಅವರು ಈಗಲೂ ಮುಟ್ಟಿನ ಸಂದರ್ಭದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಬದಲು ಬಟ್ಟೆ ಹಾಗೂ ಇತರ ಅಸುರಕ್ಷಿತ ವಸ್ತುಗಳನ್ನು ಬಳಸುತ್ತಾರೆ ಎಂದು ಕಳೆದ ವರ್ಷ ಪ್ರತಿಷ್ಠಿತ ಮ್ಯಾಗ್ಸಸ್ಸೆ ಪ್ರಶಸ್ತಿ ಪಡೆದ, ಸರಕಾರೇತರ ಸಂಸ್ಥೆ (ಎನ್‌ಜಿಒ) ‘ಗೂಂಜ್’ನ ಸ್ಥಾಪಕ ಆಂಶು ಗುಪ್ತ ಹೇಳಿದ್ದಾರೆ.
ಮಣಿಪಾಲದಲ್ಲಿ ಮಣಿಪಾಲ ವಿವಿ ವತಿಯಿಂದ ಆಯೋಜಿಸಲಾಗಿರುವ ಯುವಜನತೆಗೆ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಆಗಮಿಸಿದ ಅವರು, ಮತ್ತೊಬ್ಬ ಮ್ಯಾಗ್ಸಸ್ಸೆ ಪ್ರಶಸ್ತಿ ವಿಜೇತ ಉಡುಪಿ ಜಿಲ್ಲೆ ಮೂಲದ ಡಾ.ಹರೀಶ್ ಹಂದೆ ಅವರೊಂದಿಗೆ ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತಿದ್ದರು.
ವೈದ್ಯಕೀಯ ಕಾರಣಗಳಿಗಾಗಿ ಸ್ಯಾನಿಟರ್ ಪ್ಯಾಡ್‌ಗಳು ಮಹಿಳೆಯರಿಗೆ ಕಡ್ಡಾಯವಾಗಿರಬೇಕಿತ್ತು. ಅದರ ಮೂಲಕ ಅವರು ಮುಟ್ಟಿನ ಸಂದರ್ಭದಲ್ಲಿ ಬಾಧಿಸುವ ಹಲವು ಬಗೆಯ ರೋಗಗಳಿಂದ ಪಾರಾಗಲು ಸಾಧ್ಯವಿದೆ. ಆದರೆ ನಮ್ಮ ಸಮಾಜದ ಮಹಿಳೆಯರು ಸುರಕ್ಷಿತ ಪ್ಯಾಡ್‌ಗಳನ್ನು ಬಳಸುವುದನ್ನು ನಿರ್ಬಂಧಿಸುತ್ತಿವೆ ಎಂದವರು ಹೇಳಿದರು.
1998ರಲ್ಲಿ ತಾವು ಸ್ಥಾಪಿಸಿದ ‘ಗೂಂಜ್’ ಸಂಸ್ಥೆ ಹಳೆ ಬಟ್ಟೆಯನ್ನು ನಗರವಾಸಿಗಳಿಂದ ಸಂಗ್ರಹಿಸಿ, ಅದನ್ನು ಮರುಬಳಕೆಗೆ ಸಿದ್ಧಪಡಿಸಿ, ಗ್ರಾಮೀಣ ಪ್ರದೇಶಗಳ ಅವುಗಳ ಅಗತ್ಯವಿರುವ ಜನತೆಗೆ ನೀಡುವ ಕೆಲಸ ಮಾಡುತ್ತಿತ್ತು. ಇಂದು ಬಟ್ಟೆಗಳಲ್ಲದೇ ಜನರಿಗೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ನಾವು ಪಡೆದು ಅದನ್ನು ಅಗತ್ಯವುಳ್ಳವರಿಗೆ ವಿತರಿಸುವ ಬಲುದೊಡ್ಡ ಜಾಲವನ್ನು ಹೊಂದಿದ್ದೇವೆ ಎಂದು ಆಂಶು ಗುಪ್ತ ತಿಳಿಸಿದರು.
ನಗರವಾಸಿಗಳ ಹೆಚ್ಚುವರಿ ವಸ್ತುಗಳನ್ನು ನಾವು ಅಭಿವೃದ್ಧಿ ಸಂಪನ್ಮೂಲವಾಗಿ ಪರಿವರ್ತಿಸಿ, ಗ್ರಾಮೀಣ ಪ್ರದೇಶಗಳಲ್ಲಿರುವ ಜನರ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ನಾವು ಬಳಸಿಕೊಳ್ಳುತಿದ್ದೇವೆ. ಆದರೆ ನಾವು ಇದನ್ನು ಗ್ರಾಮೀಣ ಜನತೆಗೆ ‘ದಾನ’ವಾಗಿ ನೀಡಿ ಅವರ ‘ಘನತೆ (ಡಿಗ್ನಿಟಿ)’ಗೆ ಭಂಗ ತಾರದೇ, ಅವರಿಂದ ಅವರ ಊರಿನದೇ ಆದ ಯಾವುದಾದರೂ ಅಬಿವೃದ್ಧಿ ಕಾರ್ಯದಲ್ಲಿ ದುಡಿಸಿಕೊಂಡು ಅದಕ್ಕೆ ‘ರಿವಾರ್ಡ್’ ಆಗಿ ಈ ವಸ್ತುಗಳನ್ನು ನೀಡುತ್ತೇವೆ ಎಂದವರು ವಿವರಿಸಿದರು.
ವಾರ್ಷಿಕವಾಗಿ ನಾವಿಂದು ಸುಮಾರು 3000 ಟನ್ ವಿವಿಧ ವಸ್ತುಗಳನ್ನು ಹೀಗೆ ನಗರ ಪ್ರದೇಶಗಳಿಂದ ಸಂಗ್ರಹಿಸಿ ಅದನ್ನು ಮರುಬಳಕೆಗೆ ಸಿದ್ಧಪಡಿಸಿ, ಗ್ರಾಮೀಣ ಪ್ರದೇಶದ ಸಮುದಾಯಗಳಿಗೆ ಸಮಾನಾಂತರ ಕರೆನ್ಸಿಯಾಗಿ ನೀಡಿ, ಸ್ಥಳೀಯ ಮೂಲಭೂತ ಸೌಕರ್ಯ, ಶಿಕ್ಷಣದ ಅಗತ್ಯತೆಗಳನ್ನು ಪೂರೈಸುತಿದ್ದೇವೆ. ಇದಕ್ಕಾಗಿ ಅವರ ‘ಘನತೆ’ಗೆ ಯಾವುದೇ ಚ್ಯುತಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದವರು ನುಡಿದರು.
ನಮ್ಮಲ್ಲಿ ಹಳೆಯ ಬಟ್ಟೆ, ಪಾತ್ರೆ, ಹಾಗೂ ಇತರ ವಸ್ತುಗಳನ್ನು ಪ್ರಾಕೃತಿಕ ವಿಕೋಪಗಳಾದ ಭೂಕಂಪ, ಸುನಾಮಿ, ನೆರೆ ಹಾವಳಿಯ ಸಂದರ್ಭದಲ್ಲಿ ಸಂತ್ರಸ್ಥರಿಗೆ ವಿತರಿಸುವ ವಸ್ತುವಾಗಿ ನಾವು ಪರಿಗಣಿಸುತ್ತೇವೆ. ಆದರೆ ‘ಗೂಂಜ್’ ಇಂಥ ವಸ್ತುಗಳನ್ನು ಸಂಗ್ರಹಿಸಿ ಅದನ್ನು ಮರುಬಳಕೆಗೆ ಸಿದ್ಧಪಡಿಸಿ, ಹಳ್ಳಿಗಳಲ್ಲಿ ಅಗತ್ಯವಿರುವ ರಸ್ತೆಗಳ ನಿರ್ಮಾಣ, ದುರಸ್ಥಿ, ಕೆರೆಗಳ ಹೂಳೆತ್ತುವಿಕೆ, ಬಾವಿಗಳ ಮರುಪೂರಣ, ಮರಗಳ ಕಾಲುಸೇತುವೆ ನಿರ್ಮಾಣ, ಬೆತ್ತದಿಂದ ಸೇತುವೆಗಳ ನಿರ್ಮಾಣ, ಹಳ್ಳಿಗಳ ಸ್ವಚ್ಛತೆಗೆ ನಾವು ಬಳಸಿಕೊಳ್ಳುತ್ತೇವೆ. ಈ ಮೂಲಕ ಜನರ ಮೂಲಭೂತ ಅಗತ್ಯತೆಗಳನ್ನು ನಾವು ಸಾಧ್ಯವಿದ್ಧಷ್ಟು ಮಟ್ಟಿಗೆ ಪೂರೈಸುತ್ತೇವೆ ಎಂದರು.
1998ರಲ್ಲಿ ಗೂಂಜ್ ಸ್ಥಾಪನೆಗೊಂಡಾಗ ಕೇವಲ 67 ಯುನಿಟ್ ಬಟ್ಟೆ ಸಂಗ್ರಹವಾಗಿತ್ತು. ಇಂದು ವಾರ್ಷಿಕವಾಗಿ 3000 ಟನ್ ವಿವಿಧ ವಸ್ತುಗಳು ಸಂಗ್ರಹವಾಗುತ್ತಿದೆ. ವಾರ್ಷಿಕ 17-18 ಕೋಟಿ ರೂ.ಬಜೆಟ್ ನಮ್ಮದಾಗಿದೆ. ನಾವು ಸಂಗ್ರಹಿಸುವ ವಸ್ತುಗಳಲ್ಲಿ ಶೇ.30ರಿಂದ 40ರಷ್ಟು ಮರು ಬಳಕೆಗೆ ಯೋಗ್ಯವಲ್ಲ. ನಗರದ ಜನರು ಬಳಕೆಗೆ ಯೋಗ್ಯವಲ್ಲದ, ಸಾಧ್ಯವಿಲ್ಲದ ವಸ್ತುಗಳನ್ನು ‘ದಾನ’ವೆಂದು ನೀಡುತ್ತಾರೆ. ನಾವು ಅವುಗಳನ್ನು ಎಸೆಯಬೇಕಾಗುತ್ತದೆ.
ನಮ್ಮ ಕುಟುಂಬ ‘ರಿವಾರ್ಡ್’ಗಳ ಮೂಲಕ ನಾವು ಒಂದು ಲಕ್ಷ ಚದರ ಮೀ.ನ ಕಾಶ್ಮೀರದ ದಾಲ್‌ಲೇಕ್‌ನ್ನು ಸ್ವಚ್ಚಗೊ ಳಿಸಿದ್ದೇವೆ. ವಿವಿದೆಡೆಗಳಲ್ಲಿ 100ರಷ್ಟು ಕೆರೆಗಳನ್ನು ಸಹ ಪುನರುಜ್ಜೀವನಗೊಳಿಸಿದ್ದೇವೆ. ಇಂದು ನಾವು 16-17 ರಾಜ್ಯಗಳಲ್ಲಿ 22 ಕೇಂದ್ರಗಳನ್ನು ಹೊಂದಿದ್ದೇವೆ. ಕರ್ನಾಟಕದಲ್ಲೂ ನಾವು ಕಾರ್ಯನಿರ್ವಹಿಸುತಿದ್ದು, ಅದನ್ನು ವಿಸ್ತರಿಸುವ ಯೋಜನೆ ರೂಪಿಸಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಹರೀಶ್ ಹಂದೆ ಹಾಗೂ ಸೆಲ್ಕೋದ ಸಿಓಓ ಮೋಹನ್ ಹೆಗಡೆ ಉಪಸ್ಥಿತರಿದ್ದರು.







