ಸಂಘರ್ಷ ಪರಿಹಾರಕ್ಕೆ ಮಾತುಕತೆ ದಾರಿ: ಪ್ರಧಾನಿ

ಹೊಸದಿಲ್ಲಿ, ಆ. 5: ರಾಷ್ಟ್ರಗಳು ಹಾಗೂ ಸಮಾಜಗಳ ನಡವೆ ವಿವಾದಗಳ ಬೀಜ ಬಿತ್ತುವ, ಜಗತ್ತಿನಾದ್ಯಂತದ ಸಮುದಾಯಗಳನ್ನು ವಿಭಜಿಸುವ ಆಳಕ್ಕೆ ಬೇರು ಬಿಟ್ಟ ಧಾರ್ಮಿಕ ಸ್ಟಿರಿಯೋಟೈಪ್ ಹಾಗೂ ಪೂರ್ವಾಗ್ರಹದ ಪರಿಹಾರಕ್ಕಿರುವ ಏಕೈಕ ದಾರಿ ಮಾತುಕತೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.
21ನೇ ಶತಮಾನದ ಅಂತರ್ ಜೋಡಣೆಯ ಹಾಗೂ ಅಂತರ್ ಅವಲಂಬಿಯಾದ ಜಗತ್ತಿನಲ್ಲಿ ಭಯೋತ್ಪಾದನೆಯಿಂದ ಹಿಡಿದು ಹವಾಮಾನ ಬದಲಾವಣೆ ವರೆಗೆ ಅಸಂಖ್ಯಾಕ ಜಾಗತಿಕ ಸವಾಲುಗಳ ವಿರುದ್ಧ ಹೋರಾಡಬೇಕಿದೆ. ಏಶ್ಯಾದ ಪ್ರಾಚೀನ ಸಂಪ್ರದಾಯವಾದ ಮಾತುಕತೆಯ ಮೂಲಕ ಇದಕ್ಕೆ ಪರಿಹಾರ ಸಿಗಬಹುದು ಎಂದು ನನಗೆ ವಿಶ್ವಾಸ ಇದೆ ಎಂದು ಅವರು ಹೇಳಿದರು.
ತಾನು ಪ್ರಾಚೀನ ಭಾರತದ ಸಂಪ್ರದಾಯದ ಭಾಗವಾಗಿರುವುದರಿಂದ ಕಠಿಣ ವಿವಾದಗಳನ್ನು ಮಾತುಕತೆಯ ಮೂಲಕ ಬಗೆಹರಿಸಬಹುದು ಎಂಬ ವಿಶ್ವಾಸ ತನಗಿದೆ ಎಂದು ಮೋದಿ ಹೇಳಿದರು.
ಯಾಂಗೂನ್‌ನಲ್ಲಿ ಆಯೋಜಿಸಲಾದ ಸಂಘರ್ಷ ತಪ್ಪಿಸುವುದು ಹಾಗೂ ಪರಿಸರ ಪ್ರಜ್ಞೆಯಲ್ಲಿ ಜಾಗತಿಕ ಉಪಕ್ರಮ-ಸಂವಾದದ ಎರಡನೇ ಆವೃತ್ತಿಯಲ್ಲಿ ಅವರು ವಿಡಿಯೋ ಸಂದೇಶದ ಮೂಲಕ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ನಿಲುವುಗಳ ವಿನಿಮಯ, ಸಂಘರ್ಷ ತಪ್ಪಿಸುವ ಮಾತುಕತೆ ಹಾಗೂ ಚರ್ಚೆಯ ಮಾದರಿ ಪ್ರಾಚೀನ ಭಾರತೀಯ ಪರಿಕಲ್ಪನೆ ತರ್ಕ ಶಾಸ್ತ್ರ ಎಂದು ಪ್ರಧಾನಿ ಹೇಳಿದರು.







