ಭಾರತೀಯರಿಂದ ನಿರಾಶಾದಾಯಕ ಆರಂಭ
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್

ಲಂಡನ್, ಆ.5: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ನಿರಾಶಾದಾಯಕ ಆರಂಭ ಪಡೆದಿದ್ದಾರೆ. ಓಟಗಾರರಾದ ದ್ಯುತಿ ಚಂದ್ ಹಾಗೂ ಮುಹಮ್ಮದ್ ಅನಾಸ್ ಮೊದಲ ಸುತ್ತಿನ ಹೀಟ್ಸ್‌ನಲ್ಲಿ ನಿರ್ಗಮಿಸುವ ಮೂಲಕ ನಿರಾಶೆಗೊಳಿಸಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್‌ಗೆ ಕೊನೆಯ ಕ್ಷಣದಲ್ಲಿ ಅರ್ಹತೆ ಪಡೆದಿದ್ದ ಒಡಿಶಾದ ಓಟಗಾರ್ತಿ ಚಂದ್ ಶನಿವಾರ ನಡೆದ ಮಹಿಳೆಯರ 100 ಮೀ. ಓಟದ 5ನೆ ಹೀಟ್‌ನಲ್ಲಿ 12.07 ಸೆಕೆಂಡ್‌ನಲ್ಲಿ ಗುರಿ ತಲುಪಿ ಆರನೆ ಸ್ಥಾನ ಪಡೆದರು. ಒಟ್ಟು 47 ಅಥ್ಲೀಟ್‌ಗಳ ಪೈಕಿ ಚಂದ್ 37ನೆ ಸ್ಥಾನ ಪಡೆದರು. ಪುರುಷರ 400 ಮೀ. ಓಟದ ಮೊದಲ ಸುತ್ತಿನಲ್ಲಿ ಆರನೆ ಹೀಟ್‌ನಲ್ಲಿ ಓಟ ಆರಂಭಿಸಿದ ಕೇರಳದ ಅಥ್ಲೀಟ್ ಮುಹಮ್ಮದ್ ಅನಾಸ್ 45.98 ಸೆಕೆಂಡ್‌ನಲ್ಲಿ ಗುರಿ ತಲುಪಿ ನಾಲ್ಕನೆ ಸ್ಥಾನ ಪಡೆದರು. 52 ಸ್ಪರ್ಧಿಗಳ ಪೈಕಿ 33ನೆ ಸ್ಥಾನ ಪಡೆದರು. ವರ್ಷಾರಂಭದಲ್ಲಿ ಹೊಸದಿಲ್ಲಿಯಲ್ಲಿ 45.32 ಸೆಕೆಂಡ್‌ನಲ್ಲಿ ಗುರಿ ತಲುಪಿ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ್ದ ಅನಾಸ್ ಅದೇ ಪ್ರದರ್ಶನ ಪುನರಾವರ್ತಿಸಲು ವಿಫಲರಾದರು.
ಹೆಪ್ಟಾಥ್ಲಾನ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಸ್ವಪ್ನಾ ಬರ್ಮನ್ 31 ಸ್ಪರ್ಧಿಗಳಲ್ಲಿ 27ನೆ ಸ್ಥಾನ ಪಡೆದರು. 100 ಮೀ. ಹರ್ಡಲ್ಸ್‌ನಲ್ಲಿ 14.14 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದ ಸ್ವಪ್ನಾ ತನ್ನ ಫೇವರಿಟ್ ಸ್ಪರ್ಧೆ ಹೈಜಂಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.
ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 1.87 ಮೀ. ಎತ್ತರಕ್ಕೆ ಜಿಗಿದು ಚಿನ್ನದ ಪದಕ ಜಯಿಸಿದ್ದ ಸ್ವಪ್ನಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 1.71 ಮೀ. ದೂರ ಜಿಗಿದರು.







