ಎಐಟಿಎ ವಿರುದ್ಧ ರೋಹನ್ ಬೋಪಣ್ಣ ವಾಗ್ದಾಳಿ

ಹೊಸದಿಲ್ಲಿ, ಆ.5: ಮತ್ತೊಮ್ಮೆ ಅರ್ಜುನ ಪ್ರಶಸ್ತಿಯಿಂದ ವಂಚಿತವಾಗಿದ್ದಕ್ಕೆ ಬೇಸರಗೊಂಡಿರುವ ಭಾರತದ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಸರಿಯಾದ ಸಮಯಕ್ಕೆ ತನ್ನ ಹೆಸರನ್ನು ನಾಮನಿರ್ದೇಶನ ಮಾಡದ ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ವಿರುದ್ಧ ಕಿಡಿಕಾರಿದ್ದಾರೆ. ಅರ್ಜುನ ಪ್ರಶಸ್ತಿಗೆ ಎ.28ರೊಳಗೆ ಅರ್ಜಿಯನ್ನು ಕಳುಹಿಸಬೇಕು.
ಬೋಪಣ್ಣ ಕೆನಡಾದ ಜೊತೆಗಾರ ಗಾಬ್ರಿಯೆಲಾ ಡಾಬ್ರೊಸ್ಕಿ ಜೊತೆಗೂಡಿ ಫ್ರೆಂಚ್ ಓಪನ್‌ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಜಯಿಸಿದ ಬಳಿಕ ಜೂ.14 ರಂದು ಎಐಟಿಎ ಹೊಸ ಅರ್ಜಿ ಸಲ್ಲಿಸುವುದಾಗಿ ಹೇಳಿತ್ತು. ಎಐಟಿಎ 2014ರ ಇಂಚೋನ್ ಗೇಮ್ಸ್‌ನಲ್ಲಿ 2 ಪದಕ ಜಯಿಸಿದ್ದ ಸಾಕೇತ್ ಮೈನೇನಿ ಹೆಸರನ್ನು ಅರ್ಜುನ ಪ್ರಶಸ್ತಿಗೆ ಕಳುಹಿಸಿಕೊಟ್ಟಿದ್ದು, ಅವರು ಈವರ್ಷದ ಪ್ರಶಸ್ತಿಗೆ ಶಿಫಾರಸುಗೊಂಡಿದ್ದಾರೆ. ಬೋಪಣ್ಣ ಈ ಹಿಂದೆ ಕೂಡ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಅರ್ಜಿ ತಿರಸ್ಕೃತವಾಗುತ್ತಾ ಬಂದಿದೆ.
‘‘ನಾವು ವೃತ್ತಿಪರ ಟೆನಿಸ್ ಆಟಗಾರರು. ದೇಶಕ್ಕೆ ಸಾಕಷ್ಟು ಗೌರವ ತಂದುಕೊಡುತ್ತೇವೆ. ಆದರೆ ಟೆನಿಸ್ ಸಂಸ್ಥೆಯ ಕಾರ್ಯವೈಖರಿ ಸರಿಯಾಗಿಲ್ಲ. ಅದು ವೃತ್ತಿಪರತೆಯಿಂದ ಕೆಲಸ ಮಾಡದೇ ಆಟಗಾರರಿಗೆ ಅಗೌರವ ತೋರುತ್ತಿದ್ದು ಪ್ರಶಸ್ತಿಗೆ ಅರ್ಹತೆಯಿರುವವರನ್ನು ಕಡೆಗಣಿಸುತ್ತಿದೆ. ಅರ್ಜುನ ಪ್ರಶಸ್ತಿ ಕ್ರೀಡಾಪಟುಗಳ ಪಾಲಿಗೆ ಒಂದು ಪ್ರತಿಷ್ಠಿತ ಪ್ರಶಸ್ತಿಯಾಗಿದೆ ’’ ಎಂದು ಬೋಪಣ್ಣ ಹೇಳಿದ್ದಾರೆ.
‘‘ಎಐಟಿಎ ಈ ಬಾರಿ ಅರ್ಜುನ ಪ್ರಶಸ್ತಿಗೆ ಬೋಪಣ್ಣರ ಅರ್ಜಿಯನ್ನು ಕಳುಹಿಸಿಕೊಟ್ಟಿಲ್ಲ. ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪರ ಒಂದೂ ಪದಕವನ್ನು ಗೆಲ್ಲದ ಹಿನ್ನಲೆಯಲ್ಲಿ ಅವರ ಅರ್ಜಿ ಹಲವು ಬಾರಿ ತಿರಸ್ಕೃತವಾಗಿದೆ’’ ಎಂದು ಎಐಟಿಎ ಕಾರ್ಯದರ್ಶಿ ಹಿರೋನ್ಮಯ್ ಚಟರ್ಜಿ ಹೇಳಿದ್ದಾರೆ.







