ಇಂಜಿನಿಯರ್ ಪದವಿ ಪೂರೈಸಿದ 15ರ ಬಾಲಕ!

ಅಹ್ಮದಾಬಾದ್, ಆ.6: ಹತ್ತನೆ ತರಗತಿಯ ಬೋರ್ಡ್ ಪರೀಕ್ಷೆ ಬರೆಯಬೇಕಾದ 15ರ ಬಾಲಕ ನಿರ್ಭಯ್ ಬಿಇ(ಎಲೆಕ್ಟ್ರಿಕಲ್) ಕೋರ್ಸ್‌ನ್ನು ಮುಗಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಗುಜರಾತ್ ಟೆಕ್ನಾಲಜಿಕಲ್ ಯುನಿವರ್ಸಿಟಿ(ಜಿಟಿಯು)ಯಲ್ಲಿ ಬಿಇ ಪದವಿ ಪೂರೈಸಿದ ಅತ್ಯಂತ ಕಿರಿಯ ವಿದ್ಯಾರ್ಥಿ ಎನಿಸಿಕೊಂಡಿದ್ದಾರೆ.
ಜಾಮ್‌ನಗರದ ನಿರ್ಭಯ್ 8ನೆ ತರಗತಿಯಲ್ಲಿ ಪಾಸಾದ ಬಳಿಕ ಕ್ಯಾಂಬ್ರಿಡ್ಜ್ ಇಂಟರ್‌ನ್ಯಾಶನಲ್ ಎಕ್ಸಾಂ ನಡೆಸುತ್ತಿರುವ ಜನರಲ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜ್ಯುಕೇಶನ್(ಐಜಿಸಿಎಸ್‌ಇ)ಪದ್ದತಿಯಡಿ 9, 10ನೆ ತರಗತಿಯನ್ನು ಆರು ತಿಂಗಳಲ್ಲಿ ಪಾಸಾದರು. 11 ಹಾಗೂ 12ನೆ ತರಗತಿಯನ್ನು ಮೂರು ತಿಂಗಳಲ್ಲಿ ಪಾಸಾದರು.
ನಿರ್ಭಯ್ ತಂದೆ ಧವಳ್ ಇಂಜಿನಿಯರ್ ಹಾಗೂ ತಾಯಿ ವೈದ್ಯ ವೃತ್ತಿಯಲ್ಲಿದ್ದಾರೆ. ಈ ಇಬ್ಬರು ಮಗನನ್ನು ಎಸ್‌ಎಎಲ್ ಇಂಜಿನಿಯರ್ ಕಾಲೇಜಿಗೆ ಸೇರಿಸಲು ನಿರ್ಧರಿಸಿದರು.
"ಬೋಧಕರ ವಿಭಾಗದ ಜೊತೆಗೂಡಿ ನಿರ್ಭಯ್ ಬೇಗನೆ ಕೋರ್ಸ್ ಪೂರ್ಣಗೊಳಿಸಲು ವಿಶೇಷ ವೇಳಾಪಟ್ಟಿ ಸಿದ್ಧಪಡಿಸಲಾಗಿತ್ತು. ನಿರ್ಭಯ್ 9 ಗಂಟೆ ಕಾಲೇಜಿನಲ್ಲಿರುತ್ತಿದ್ದರು. ಜಿಟಿಯು ನಿಯಮದಂತೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗಿದ್ದು, ಫಲಿತಾಂಶವನ್ನು ಆತನಿಗೋಸ್ಕರ ಪ್ರಕಟಿಸಲಾಗಿತ್ತು'' ಎಂದು ಕಾಲೇಜಿನ ಪ್ರಾಂಶುಪಾಲ ಡಾ.ರೂಪೇಶ್ ವಸಾನಿ ಹೇಳಿದ್ದಾರೆ.
ಮಗನ ಶಿಕ್ಷಣದತ್ತ ಗಮನ ಹರಿಸಲು ಧವಳ್ ತಮ್ಮ ವೃತ್ತಿಯನ್ನು ತ್ಯಜಿಸಿದ್ದಾರೆ. ನಿರ್ಭಯ್ ಓದಿನ ಜೊತೆಗೆ ಫುಟ್ಬಾಲ್, ಚೆಸ್ ಹಾಗೂ ಸ್ವಿಮ್ಮಿಂಗ್‌ನಲ್ಲೂ ಸಕ್ರಿಯರಾಗಿದ್ದಾರೆ.







